
ಹುಬ್ಬಳ್ಳಿ: ಇಲ್ಲಿನ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ನೇಹಾ ನಿವಾಸಕ್ಕೆ ಇಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭೇಟಿ ನೀಡಿದರು. ಈ ವೇಳೆ ನೇಹಾ ಪೋಷಕರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹತ್ಯೆ ಖಂಡನೀಯ, ನೇಹಾ ಕುಟುಂಬದೊಂದಿಗೆ ಹಿಂದೂಳಿದ ವರ್ಗವಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ಕೃತ್ಯದ ಹಿಂದೆ ಒಳಸಂಚು ಏನಾದರೂ ಇದೆಯಾ? ಕೃತ್ಯ ಎಸಗುವಾಗ ಯಾರಾದರೂ ಸಹಕಾರ ಕೊಟ್ಟಿದ್ದಾರಾ? ಕೃತ್ಯ ನಡೆದ ನಂತರ ಸಾಕ್ಷಿ ಆಧಾರ ನಾಶ ಮಾಡುವ ಸಂಚು ನಡೆದಿದೆಯೇ? ಅಪರಾಧ ಮುಚ್ಚಿಹಾಕುವ ಪ್ರಯತ್ನದ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು. ಸರ್ಕಾರ ಇಚ್ಚೆಸಿದರೇ ತನಿಖೆಗೆ ನಾನು ಮಾರ್ಗದರ್ಶನ ನೀಡುತ್ತೇನೆ ಎಂದರು.
ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆರೋಪಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಇಡೀ ರಾಷ್ಟ್ರದ ಜನತೆ ನೋಡುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗೆ ಕಠಿಣವಾದ ಶಿಕ್ಷೆ ವಿಧಿಸುವ ಮೂಲಕ ಸರ್ಕಾರ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇಹಾ ತಂದೆ ನಿರಂಜನಯ್ಯ ಹಿರೇಮಠ, ತಾಯಿ ಗೀತಾ, ಮುಖಂಡರಾದ ಮುಕ್ತಾರ ಪಠಾಣ್, ಮೋಸಿನ್, ಇಮ್ತಿಯಾಜ್, ಕಲಂದರ್, ಸಂಜಯ ಜೈನ್, ಅಲ್ಲಾಭಕ್ಷ, ದಿಲೀಪ್ ಸೇರಿದಂತೆ ಹಲವರು ಇದ್ದರು.