July 4, 2025

ಹುಬ್ಬಳ್ಳಿ,: ರೈತರ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುದೀಕರಣ ಕಾಮಗಾರಿಯನ್ನು ಅಗತ್ಯವಿರುವ ವಿದ್ಯುತ್ ಮೂಲ ಸೌಕರ್ಯದೊಂದಿಗೆ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದೆ.

2023ರ ಸೆಪ್ಟೆಂಬರ್‌ 22ಕ್ಕೂ ಮುನ್ನ ಹಾಗೂ ನಂತರ ನೋಂದಣಿಗೊಂಡ / ಹಾಲಿ ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಇಚ್ಚಿಸಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿಗಳಂತೆ ವಿದ್ಯುತ್‌ ಜಾಲ ಶುಲ್ಕ ರೂ.15,000 ಮತ್ತು ಠೇವಣಿ ಹಣವನ್ನು ಪಾವತಿಸಿ, ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಲೈನ್‌ ಸೇರಿದಂತೆ ವಿದ್ಯುತ್ ಮೂಲ ಸೌಕರ್ಯ ನಿರ್ಮಾಣ ಕಾರ್ಯ ಕೈಗೊಂಡರೆ ಹೆಸ್ಕಾಂ ವತಿಯಿಂದ ಎರಡು ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್‌ಸೆಟ್‌ಗಳನ್ನು ಒಟ್ಟುಗೂಡಿಸಿ ಸೂಕ್ತ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರನ್ನು ಒದಗಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಸೆ.22, 2023ರ ನಂತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಸ್ವಯಂ ಕಾರ್ಯ ನಿರ್ವಹಣೆ (ರೈತರೇ ವಿದ್ಯುತ್‌ ಮಾರ್ಗ ಹಾಗೂ ಟಿಸಿ ಅಳವಡಿಸಿಕೊಳ್ಳುವುದು)ಯಡಿ ನೋಂದಣಿಗೊಂಡ ರೈತರು ಸಹ ಇಚ್ಚಿಸಿದ್ದಲ್ಲಿ ಅಗತ್ಯ ಶುಲ್ಕ ಮತ್ತು ಠೇವಣಿ ಹಣ ಪಾವತಿಸಿ ಈ ಹೊಸ ಯೋಜನೆಯಾದ ನವೀಕೃತ ಶೀಘ್ರ ಸಂಪರ್ಕ ( ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಮಾರ್ಗ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಳ್ಳುವುದು, ಮತ್ತು ಹೆಸ್ಕಾಂ ವತಿಯಿಂದ ಟಿಸಿ ಒದಗಿಸಲಾಗುವುದು)ದಡಿ ವಿದ್ಯುತ್‌ ಸಂಪರ್ಕ ಪಡೆಯಬಹುದು. ಇನ್ನು ಈಗಾಗಲೇ ಇರುವ ವಿದ್ಯುತ್‌ ಮಾರ್ಗದಿಂದ ವಿದ್ಯುತ್‌ ಸಂಪರ್ಕ ಪಡೆಯಲು ಬಯಸಿದ ರೈತರು ಸಹ ವಿದ್ಯುತ್‌ ಜಾಲ ಶುಲ್ಕ ರೂ.15,000 ಮತ್ತು ಅಗತ್ಯ ಠೇವಣಿ ಹಣ ಪಾವತಿಸಬೇಕು. ಆದರೆ, ಅಂತಹ ರೈತರು ನವೀಕೃತ ಶೀಘ್ರ ಸಂಪರ್ಕ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಈಗಾಗಲೇ ಶೀಘ್ರ‌ ಸಂಪರ್ಕ/ನವೀಕೃತ ಶೀಘ್ರ ಸಂಪರ್ಕದಲ್ಲಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳಲ್ಲಿ ಹೆಚ್ಚುವರಿ ಪಂಪ್‌ಸೆಟ್‌ಗಳ ವಿದ್ಯುತ್ ಹೊರೆಯನ್ನು‌ ಧಾರಣ ಮಾಡುವ ಸಾಮರ್ಥ್ಯವಿದ್ದಲ್ಲಿ ನವೀಕೃತ ಶೀಘ್ರ ಸಂಪರ್ಕದಲ್ಲಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳಿಗೆ ಸದರಿ ಪರಿವರ್ತಕಗಳಿಂದಲೇ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತು ಹೆಸ್ಕಾಂ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.

ರೈತರು ಸ್ವಯಂ ಕಾರ್ಯ ನಿರ್ವಹಣೆ ಮತ್ತು ನವೀಕೃತ ಶೀಘ್ರ ಸಂಪರ್ಕ ಯೋಜನೆ ಅಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ತಗಲುವ ವೆಚ್ಚಕ್ಕೆ ವಿಧಿಸಲಾಗುವ ಮೇಲ್ವಿಚಾರಣಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ನವೀಕೃತ ಶೀಘ್ರ ಸಂಪರ್ಕ ಯೋಜನೆಯು ವಿದ್ಯುತ್‌ ಜಾಲದಿಂದ 500 ಮೀಟರ್‌ ಒಳಗಿರುವ ಎಲ್ಲಾ ಕೃಷಿ ಪಂಪ್‌ಸೆಟ್‌ಗಳಿಗೆ ಅನ್ವಯವಾಗುತ್ತದೆ. ವಿದ್ಯುತ್‌ ಜಾಲದಿಂದ 500 ಮೀಟರ್‌ಗಿಂತ ದೂರ ಇರುವ ಪಂಪ್‌ಸೆಟ್‌ಗಳಿಗೆ ಸೋಲಾರ್‌ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸೋಲಾರ್‌ ಪಂಪ್‌ಸೆಟ್‌ಗಳಿಗೆ ಕುಸುಮ್‌ -ಬಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ.30, ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ. 20 ರಷ್ಟು ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕಾಗುತ್ತದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!