
ಪಬ್ಲಿಕ್ ರೈಡ್ ನ್ಯೂಸ್ ಪಾವಗಡ :- ತಾಲ್ಲೂಕಿನಾಧ್ಯಂತ ಬರಗಾಲವಿದ್ದು, ರಾಸುಗಳಿಗೆ ಮೇವು ದೊರೆಯದಿರುವ ಪರಿಸ್ಥಿತಿಯನ್ನು ಅರಿತು ಮೇವು ಬ್ಯಾಂಕುಗಳನ್ನು ಆರಂಭಿಸಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.
ವೈ.ಎನ್.ಹೊಸಕೋಟೆ ಗ್ರಾಮದ ಸಿದ್ದಲಿಂಗೇಶ್ವರ ಉಣ್ಣೆ ಕೈಮಗ್ಗ ನೇಕಾರಿಕೆ ಸೊಸೈಟಿ ಆವರಣದಲ್ಲಿ ಗುರುವಾರ ಮೇವು ಬ್ಯಾಂಕ್ ಆರಂಭಿಸಿ ಮಾತನಾಡಿದ ಅವರು, ಮಳೆ ಇಲ್ಲದೆ ದನಕರುಗಳಿಗೆ ಹುಲ್ಲು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ನಾಗಲಮಡಿಕೆಯಲ್ಲಿ ಒಂದು ತಿಂಗಳ ಹಿಂದೆಯೇ ಮೇವು ಬ್ಯಾಂಕ್ ಆರಂಭಿಸಿದ್ದು, ಬಹಳಷ್ಟು ರೈತರು ಅದರ ಉಪಯೋಗ ಪಡೆಯುತ್ತಿದ್ದಾರೆ. ಈ ಭಾಗದ ರೈತರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳ ಮಾರ್ಗಸೂಚಿಯಂತೆ ವೈ.ಎನ್.ಹೊಸಕೋಟೆಯಲ್ಲೂ ಮೇವು ಬ್ಯಾಂಕನ್ನು ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಜಾನುವಾರುಗಳಿಗೆ ಮೇವು ನೀಡಿ ರಕ್ಷಿಸಿಕೊಳ್ಳಬೇಕು ಎಂದರು.
ಪ್ರತಿ ಜಾನುವಾರಿಗೆ ದಿನವೊಂದಕ್ಕೆ 6 ಕೆಜಿ ಮೇವು ನೀಡಲಾಗುವುದು. ಪ್ರತಿ ಕೆಜಿಗೂ 2 ರೂನಂತೆ ರೈತರು ಹಣ ಪಾವತಿಸಿ ಸಾಗಾಟದ ಅನುಕೂಲಕ್ಕಾಗಿ ಒಮ್ಮೆಲೆ 7 ದಿನಗಳಿಗೆ ಆಗುವಷ್ಟು ಮೇವನ್ನು ಪಡೆಯಬಹುದಾಗಿದೆ. ಅಗತ್ಯ ಇರುವ ರೈತರು ಪಶು ಆಸ್ಪತ್ರೆಯಲ್ಲಿ ದಾಖಲೆಗಳನ್ನು ಒದಗಿಸಿ ಕಾರ್ಡು ಪಡೆದುಕೊಂಡು ಬಂದರೆ ಅದರ ಆಧಾರದಲ್ಲಿ ಮೇವು ನೀಡಲಾಗುವುದು ಎಂದರು.
ಹುಲ್ಲನ್ನು ವಿವಿಧ ಪ್ರದೇಶಗಳಿಂದ ಪಡೆಯಲಾಗುತ್ತಿದ್ದು, ಟೆಂಡರ್ ದಾರರು ಉತ್ತಮ ಗುಣಮಟ್ಟದ ಹುಲ್ಲನ್ನು ಒದಗಿಸುತ್ತಿದ್ದಾರೆ. ಹುಲ್ಲಿನ ಗುಣಮಟ್ಟ ಕಡಿಮೆ ಇದೆ ಎಂದು ಕಂಡುಬಂದರೆ ಅಂತಹ ಹುಲ್ಲನ್ನು ಯಾವುದೇ ಮುಲಾಜಿಲ್ಲದೆ ವಾಪಸ್ಸು ಕಳುಹಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಮಳೆ ಬಂದು ಹುಲ್ಲು ಚಿಗುರುವವರೆಗೂ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಮೇವು ಬ್ಯಾಂಕಿನಲ್ಲಿ ಸರ್ಕಾರದ ವತಿಯಿಂದ ಹುಲ್ಲು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಪಶುವೈದ್ಯಕೀಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಸಹಾಯಕ ನಿರ್ದೇಶಕ ಹರಿಕೇರಪ್ಪ, ಸ್ಥಳೀಯ ಪಶುಇಲಾಖಾಧಿಕಾರಿ ಜಗನ್ನಾಥ, ಉಪತಹಶೀಲ್ದಾರ್ ಕಿರಣ್ ಕುಮಾರ್, ಗ್ರಾಮಲೆಕ್ಕಿಗ ಅಂಜಾದ್ ಖಾನ್, ರಘುವೀರ್, ಮಂಜು, ಸಚಿನ್, ಪುನಿತ್, ಶ್ರೀಧರ್, ಪಿಡಿಓ ಜಯಣ್ಣ, ಕಾರ್ಯದರ್ಶಿ ಹನುಮಂತರಾಯಪ್ಪ, ರವೀಂದ್ರ ಇತರರು ಇದ್ದರು.
ವರದಿ ಲಿಂಗಮಯ್ಯ ಆರ್ ಎನ್
ಪಾವಗಡ