
ಪಬ್ಲಿಕ್ ರೈಡ್ ಹಾವೇರಿ: ಕುಸುಮ್- ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ರಾಜ್ಯ ಸರ್ಕಾರದ ಶೇ.50 ರಷ್ಟು ಸಬ್ಸಿಡಿ ಜತೆಗೆ ಒಟ್ಟಾರೆ ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಎಲ್ಲ ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ ಅವರು ಹೇಳಿದರು.
ಬುಧವಾರ ಜಿಲ್ಲೆಯ ಸವಣೂರು ತಾಲ್ಲೂಕಿನ ಶಿರಬಡಗಿ ಗ್ರಾಮದ ರೈತ ಗಂಗಾಧರ ಪರಮ್ಮನವರ ಜಮೀನಿನಲ್ಲಿ ಅಳವಡಿಸಲಾದ ನೂತನ್ ಸೋಲಾರ್ ಪಂಪ್‌ಸೆಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಸುಮ್ ಬಿ ಯೋಜನೆಗೆ ಕೇಂದ್ರ ಸರ್ಕಾರವು ಶೇ.30, ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತಿದೆ. ರೈತರು ಕೇವಲ ಶೇ.20 ರಷ್ಟು ಮಾತ್ರ ಹಣ ಪಾವತಿಸಿ, ಈ ಯೋಜನೆಯ ಲಾಭ ಪಡೆಯಬಹುದು. ರೈತರು ವಿದ್ಯುತ್ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ರೈತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಕುಸುಮ್- ಬಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸೋಲಾರ್ ಪಂಪ್‌ಸೆಟ್ ರೈತರಿಗೆ ವರದಾನವಾಗಿವೆ. ಸೋಲಾರ್ ಪಂಪ್‌ಸೆಟ್ ಮೂಲಕ ಹಗಲು ಹೊತ್ತಿನಲ್ಲಿಯೇ ಎಂಟು ಗಂಟೆಗಳ ಕಾಲ ನಿರಂತರ ನೀರು ಪಡೆಯಬಹುದು ಎಂದು ಫಲಾನುಭವಿ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ಬಾಬಾ ಹುಸೇನ್ ಗೌಡಗೆರಿ, ಜಾಕಿರ ಅಹ್ಮದ ಪರಾಷ, ಕಿಮಣ್ಣ ಲಮಾಣಿ, ಅಡಿವೆಪ್ಪ ಹರಿಜನ, ಮಹಾಲಿಂಗಪ್ಪ ಕುಂಬಾರ, ಹೆಸ್ಕಾಂನ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.