
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ‘ಯಾವ ಉತ್ಪನ್ನಗಳಿಗೆ ಬೇಡಿಕೆ ಇದೆ ಅದನ್ನು ಉತ್ಪಾದನೆ ಮಾಡಿ ಲಾಭ ಗಳಿಸಬೇಕು.ದೇಶಕ್ಕೆ ಹೆಚ್ಚು ಆರ್ಥಿಕ ಸಂಪಾದನೆ ಎಂಎಸ್ಎಂಇ ಗಳಿಂದ ಆಗುತ್ತಿದೆ’ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮತ್ತು ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪೀಣ್ಯ ಕೈಗಾರಿಕಾ ಸಂಘದಲ್ಲಿ ಪಿಐಎ ಸಂಸ್ಥಾಪಕರ ದಿನಾಚರಣೆ ಮತ್ತು ಅಂತರರಾಷ್ಟ್ರೀಯ ಎಂಎಸ್ಎಂಇ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿ ಸುಮಾರು 20 ಕೋಟಿ ಜನಕ್ಕೆ ಉದ್ಯೋಗ ಎಂ ಎಸ್ ಎಂ ಇ ನೀಡುತ್ತದೆ. ಬೇರೆ ಬೇರೆ ತಂತ್ರಜ್ಞಾನಗಳು, ಯಂತ್ರೋಪಕರಣಗಳು ಪರಿಕರಗಳು ಕೊಡುವ ಜಾಗವೆಂದರೆ ಅದು ಪೀಣ್ಯ ಕೈಗಾರಿಕಾ ಪ್ರವೇಶ. ನರೇಂದ್ರ ಮೋದಿಜಿ ಬಂದಮೇಲೆ ಸ್ಕಿಲ್ ಡೆವಲಪ್ಮೆಂಟ್ ಆಗಿದೆ. ಎಲ್ಲಾ ಕಾರ್ಮಿಕರು ಕೌಶಲ್ಯ ತರಬೇತಿ ಪಡೆಯಬೇಕು. ಅದನ್ನು ದೊಡ್ಡಮಟ್ಟದಲ್ಲಿ ತರುವ ಉದ್ದೇಶವಿದೆ’ ಎಂದರು.
‘ಹಣಕಾಸಿನ ವಿಭಾಗದಿಂದ ಎಂಎಸ್ಎಂಇ ಗೆ ಸಹಾಯ ಏನಾಗಬೇಕು. ಬೆಸ್ಕಾಂ, ಬಿ ಡಬ್ಲ್ಯೂ ಎಸ್ ಎಸ್ ಬಿ ಮುಂತಾದ ವಿವಿಧ ಇಲಾಖೆಯಲ್ಲಿ ರಾಜ್ಯ ಸರ್ಕಾರದಿಂದ ಏನಾಗಬೇಕು ಎಂಬುದನ್ನು ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಂಘದವರಿಂದ ಚರ್ಚಿಸಿ ಸಮಸ್ಯೆಗೆ ಪರಿಹಾರ ಒದಗಿಸೋಣ ಎಂದರು.
ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ’ಇನ್ಫ್ರಾಸ್ಟ್ರಕ್ಚರ್ ಡೆವಲಪಿಂಗ್ ಮಾಡಿಕೊಟ್ಟರೆ ಅಧಿಕ ಉದ್ಯೋಗಾವಕಾಶಗಳು, ಯುವ ಸಮೂಹ ಸದ್ಬಳಕೆ ಮತ್ತು ತೆರಿಗೆ ಆದಾಯ ಈ ಭಾಗದಿಂದ ಹೆಚ್ಚು ನೀಡಲಾಗುತ್ತದೆ’ ಎಂದ ಅವರು ಸಂಘದ ವತಿಯಿಂದ ಐದಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ಶಾಸಕ ಎಸ್. ಮುನಿರಾಜು ಮಾತನಾಡಿ’ ಸಣ್ಣ ಗುಂಡುಪಿನ್ನಿನಿಂದ ಹಿಡಿದು ಏರೋ ಸ್ಪೇಸ್ ಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳು ಸಹ ಈ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತಯಾರಾಗುತ್ತದೆ. ಅಂತಹ ದೊಡ್ಡ ಕೈಗಾರಿಕೆಗಳು ಇಲ್ಲಿದೆ’ ಎಂದರು.
ಈ ಸಂದರ್ಭದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಸ್. ಮುನಿರಾಜು, ಲಘು ಉದ್ಯೋಗಗ ಭಾರತಿ ಉಪಾಧ್ಯಕ್ಷ ಶ್ರೀಕಂಠ ದತ್ತ, ಕಾಶಿಯಾ ಅಧ್ಯಕ್ಷ ರಾಜಗೋಪಾಲ್, ಸಂಘದ ಉಪಾಧ್ಯಕ್ಷ ದಾನಪ್ಪ, ಖಜಾಂಚಿ ಕೃಷ್ಣಮೂರ್ತಿ, ಜಂಟಿ ಖಜಾಂಚಿ ಗೋಪಾಲ ರೆಡ್ಡಿ, ಗೌರವ ಕಾರ್ಯದರ್ಶಿ ಮಲ್ಲೇಶ್ ಗೌಡ, ಉದ್ಯಮಿ ತಿಮ್ಮೇಗೌಡ ಮುಂತಾದವರಿದ್ದರು