
ಗದಗ :ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಶುಕ್ರವಾರ ಲಕ್ಷ್ಮೇಶ್ವರದ ಹೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿದ ಅವರು, ಇಲ್ಲಿನ ಅಧಿಕಾರಿಗಳ, ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯು ಶೇ.97.05 ರಷ್ಟು ಪ್ರಗತಿ ಸಾಧಿಸಿದ್ದು, ಇದು ಶೇ.100 ರಷ್ಟನ್ನಾಗಿಸಲು ಎಲ್ಲರೂ ಶ್ರಮಿಸಬೇಕು. ಯೋಜನೆಯಿಂದ ಹೊರಗೆ ಉಳಿದವರನ್ನು ಗುರುತಿಸಿ ಅವರಿಗೆ ಗೃಹಜ್ಯೋತಿ ಯೋಜನೆ ತಲುಪುವಂತೆ ಮಾಡಬೇಕು. ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಹೇಳಿದರು.
ಲಕ್ಷ್ಮೇಶ್ವರ ಉಪ ವಿಭಾಗಕ್ಕೆ ನೂತನ ಕಟ್ಟಡದ ಅಗತ್ಯತೆ ಇರುವುದು ನಮ್ಮ ಗಮನಕ್ಕೆ ಬಂದಿದ್ದು, ಇಂದು ಸ್ಥಳ ಪರಿಶೀಲನೆ ಕೂಡ ಮಾಡಲಾಗಿದೆ. ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಲಕ್ಷ್ಮೇಶ್ವರದಲ್ಲಿ ಟಿಸಿ ಟೆಸ್ಟಿಂಗ್ ಬೆಂಚ್, ಒಂದು ಲ್ಯಾಡರ್ ವೆಹಿಕಲ್ ಹಾಗೂ ಡಿಟಿಸಿ ವೆಹಿಕಲ್, ಟಿಸಿ ಬಫರ್ ಸ್ಟಾಕ್ ಒದಗಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಉಪಾಧ್ಯಕ್ಷ ಪಿರದೋಷ ಆಡೂರು, ಸದಸ್ಯರಾದ ರಾಜಣ್ಣ ಕುಂಬಿ, ರಾಮಣ್ಣ ಗಡದವರ, ಸಾಹೇಬಜಾನ್ ಹವಾಲ್ದಾರ, ಲಕ್ಷ್ಮೇಶ್ವರ ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅಂಜೀನಪ್ಪ ಬಿ, ಸೆಕ್ಷನ್ ಆಫೀಸರ್ ಕಿರಣ್ ಕುಮಾರ್ ಪಮ್ಮಾರ, ಶಿರಹಟ್ಟಿ ಸೆಕ್ಷನ್ ಆಫೀಸರ್ ಬಸವರಾಜ್, ಲಕ್ಷ್ಮೇಶ್ವರ ಗ್ರಾಮೀಣ ಸೆಕ್ಷನ್ ಆಫೀಸರ್ ಸಂತೋಷ ನಾಯಕ, ಸಿಗ್ಲಿ ಸೆಕ್ಷನ್ ಆಫೀಸರ್ ಅಮರೇಶ ಹುನಗೂರು, ಸ್ಥಳೀಯ ಸಮಿತಿ ಅಧ್ಯಕ್ಷ ಮತ್ತು ಮೇಲ್ವಿಚಾರಕ ರಘುಪತಿ ನಾಯಕ, ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸಂತೋಷ ಮೇಟಿ ಸೇರಿದಂತೆ ಹೆಸ್ಕಾಂನ ಸಿಬ್ಬಂದಿ ಹಾಗೂ ಸ್ಥಳೀಯರು ಹಾಜರಿದ್ದರು.