
ಧಾರವಾಡ: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರು ಆ ವಾಹನವನ್ನು ಹಿಡಿದಿರುವ ಘಟನೆ ಧಾರವಾಡದ ರಮ್ಯಾ ರೆಸಿಡೆನ್ಸಿ ಬಳಿ ನಡೆದಿದೆ.
ಬೆಳಗಾವಿಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಗೋಮಾಂಸವನ್ನು ಸಾಗಿಸಲಾಗುತ್ತಿತ್ತು. ಈ ಖಚಿತ ಮಾಹಿತಿ ಮೇರೆಗೆ ನರೇಂದ್ರ ಕ್ರಾಸ್‌ನಿಂದ ಮಹೀಂದ್ರಾ ಗೂಡ್ಸ್ ವಾಹನವನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿದ್ದರು. ಈ ವೇಳೆ ಆ ಗೂಡ್ಸ್ ವಾಹನದ ಚಾಲಕ ಬಜರಂಗದಳ ಕಾರ್ಯಕರ್ತರಿದ್ದ ವಾಹನಕ್ಕೆ ತನ್ನ ವಾಹನ ಡಿಕ್ಕಿಪಡಿಸಿಕೊಂಡು ಮುಂದೆ ಹೋಗಿದ್ದಾನೆ.
ಆದರೂ ಆ ವಾಹನ ಬಿಡದ ಬಜರಂಗದಳ ಕಾರ್ಯಕರ್ತರು ಮಾಂಸ ಸಾಗಿಸುತ್ತಿದ್ದ ವಾಹನ ಬೆನ್ನಟ್ಟಿ ಹೋಗಿದ್ದಾರೆ. ಆದರೆ, ಗೂಡ್ಸ್ ವಾಹನದ ಚಾಲಕ ಹಾಗೂ ಕ್ಲೀನರ್ ಮುಂದೆ ರಮ್ಯ ರಸಿಡೆನ್ಸಿ ಬಳಿ ತಮ್ಮ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಬಜರಂಗದಳ ಕಾರ್ಯಕರ್ತರು ವಾಹನ ತಪಾಸಣೆ ನಡೆಸಿದಾಗ ಅಂದಾಜು ಒಂದು ಟನ್‌ಷ್ಟು ಗೋಮಾಂಸವನ್ನು ಐಸ್‌ನಲ್ಲಿ ಇಟ್ಟುಕೊಂಡು ಸಾಗಿಸುತ್ತಿದುದು ಕಂಡು ಬಂದಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಗೂ ಬಜರಂಗದಳ ಕಾರ್ಯಕರ್ತರು ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.