
ಧಾರವಾಡ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ 21 ವರ್ಷಗಳ ನಂತರ ಗ್ರಾಮ ದೇವಿಯರ ಜಾತ್ರೆ ಅದ್ಧೂರಿಯಿಂದ ನೆರವೇರುತ್ತಿದ್ದು, ಗ್ರಾಮಸ್ಥರೆಲ್ಲರೂ ಗ್ರಾಮ ದೇವತೆಯರ ಜಾತ್ರೆಯಲ್ಲಿ ಭಾಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದರ ಜತೆಗೆ ದೇವರ ಕೃಪೆಗೆ ಪಾತ್ರರಾದರು.
ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಮೂರ್ತಿಗಳು ಪುರಪ್ರವೇಶ ಮಾಡಿದ್ದು, ಶನಿವಾರ ಗ್ರಾಮದ ತುಂಬೆಲ್ಲ ಸಂಭ್ರಮದ ಹೊನ್ನಾಟ ನಡೆಯುತ್ತಿದೆ. ಶನಿವಾರ ಯಾದವಾಡ ಗ್ರಾಮದ ಪ್ರಮುಖ ಏರಿಯಾಗಳಲ್ಲಿ ಗ್ರಾಮ ದೇವಿಯರ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಗಲ್ಲಿ ಗಲ್ಲಿಯಲ್ಲೂ ಗ್ರಾಮಸ್ಥರು ಬಂಡಾರ ಎರಚಿ ಹೊನ್ನಾಟ ಆಡಿದರು.
ಈ ಜಾತ್ರಾ ಮಹೋತ್ಸವಕ್ಕಾಗಿಯೇ ಕ್ವಿಂಟಾಲ್‌ಗಟ್ಟಲೇ ಬಂಡಾರ ತರಲಾಗಿದೆ. ಯಾದವಾಡ ಗ್ರಾಮಸ್ಥರು ಶನಿವಾರವಂತೂ ಅಕ್ಷರಶಃ ಬಂಡಾರದಲ್ಲಿ ಮಿಂದೆದ್ದಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಸ್ಥರಿಗೆ ಪ್ರಸಾದದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವ ಯಾದವಾಡ ಗ್ರಾಮ ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ.