
ಹುಬ್ಬಳ್ಳಿ,:ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಅದರಲ್ಲೂ ಲೈನ್‌ಮೆನ್‌ಗಳು ಸುರಕ್ಷತೆಗೆ ಮೊದಲ ಅದ್ಯತೆ ನೀಡಬೇಕು. ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಲೈನ್‌ಮೆನ್‌ಗಳು ತಪ್ಪದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್ ಅವರು ಹೇಳಿದರು.
ನವನಗರದ ಹೆಸ್ಕಾಂ ನಿಗಮ ಕಚೇರಿಯಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಹಾಗೂ ಕರ್ತವ್ಯದ ವೇಳೆ ವಿದ್ಯುತ್ ಅಪಘಾತದಿಂದ ನಿಧನರಾದ ನೌಕರರ ಸ್ಮರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನಕ್ಕಿಂತ ಜೀವ ಮುಖ್ಯ. ಜೀವ ಇದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ಜೀವ ಒಮ್ಮೆ ಹೋದರೆ ಮತ್ತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಮೊದಲು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು. ಸಂಯಮ, ಶಿಸ್ತು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರಿಂದ ವಿದ್ಯುತ್ ಅವಘಡಗಳನ್ನು ತಡೆಯಬಹುದು. ವಿದ್ಯುತ್ ಇಲಾಖೆಯ ನೌಕರರು ತಮ್ಮ ಕುಟುಂಬವನ್ನೂ ಗಮನದಲ್ಲಿಕೊಂಡು ಕೆಲಸ ಮಾಡಬೇಕು. ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅರ್ಧಗಂಟೆ ತಡವಾದರೂ ಪರವಾಗಿಲ್ಲ, ಎಲ್ಲ ಸುರಕ್ಷತಾ ಪರಿಕರಗಳನ್ನು ಉಪಯೋಗಿಸಿಕೊಂಡು, ಎಲ್ ಸಿ (ಲೈನ್ ಕ್ಲಿಯರೆನ್ಸ್) ಖಚಿತಪಡಿಸಿಕೊಂಡೇ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಂತ್ರಿಕ ನಿರ್ದೇಶಕರಾದ ಎಸ್. ಜಗದೀಶ್ ಮಾತನಾಡಿ, ವಿದ್ಯುತ್ ಇಲಾಖೆಯ ನೌಕರರು ಕರ್ತವ್ಯದ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಬಾರದು. ಅವಸರ, ಅತೀ ಆತ್ಮವಿಶ್ವಾಸವೇ ವಿದ್ಯುತ್ ಅವಘಡಗಳಿಗೆ ಕಾರಣವಾಗುತ್ತವೆ. ಜಾಗೃಕತೆಯಿಂದ ಕರ್ತವ್ಯ ನಿಭಾಯಿಸುವುದರಿಂದ ವಿದ್ಯುತ್ ಅವಘಡಗಳನ್ನು ತಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ನೌಕರರ ಕುಟುಂಬದವರಿಗೆ ಸ್ಮರಿಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ನೌಕರರ ಸಂಘದ ಉಪಾಧ್ಯಕ್ಷರಾದ ವಿ.ಎಲ್ ಗುಂಜಿಕರ್, ಪಿ.ಎಸ್ ಶಿಂಧೆ, ಕೆಪಿಟಿಸಿಎಲ್ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಆಸೀಪ್ ಖಾನ್ ಶಿವಳ್ಳಿ ಸೇರಿದಂತೆ ಹೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಅಡಿವೆಪ್ಪ ಮೆಣಸಿನಕಾಯಿ ನಿರೂಪಿಸಿದರು, ಎಂ.ಬಿ ಸುಣಗಾರ ವಂದಿಸಿದರು.