
ಧಾರವಾಡ
ಬಿಜೆಪಿಯಿಂದ ಉಚ್ಛಾಟನೆಗೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಗ್ರಹಿಸಿ, ಧಾರವಾಡದಲ್ಲಿ ಲಿಂಗಾಯತ ವಕೀಲರು ಹಾಗೂ ಪಂಚಮಸಾಲಿ ಮುಖಂಡರು ಕೇಂದ್ರ ಬಿಜೆಪಿ ನಾಯಕರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿದರು.
ಧಾರವಾಡದ ಲಿಂಗಾಯತ ನ್ಯಾಯವಾದಿಗಳು ಹಾಗೂ ಪಂಚಮಸಾಲಿ ಮುಖಂಡರು ಧಾರವಾಡದಲ್ಲಿ ಪತ್ರ ಚಳುವಳಿ ನಡೆಸಿದ್ದು, ಯತ್ನಾಳ ಅವರು ನೇರ ನುಡಿಯ ನಿಷ್ಠುರ ವ್ಯಕ್ತಿ. ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದಂತವರು. ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದಕ್ಕೆ ಲಕ್ಷಾಂತರ ಹಿಂದೂ ಕಾರ್ಯಕರ್ತರು ನೊಂದುಕೊಂಡಿದ್ದಾರೆ.
ಯತ್ನಾಳ ಅವರಿಲ್ಲದೇ ಬಿಜೆಪಿ ಬರುವ ದಿನಗಳಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ. ಲಕ್ಷಾಂತರ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದು ಅತೀವ ನೋವುಂಟು ಮಾಡಿದೆ. ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಾದರೆ, ಯತ್ನಾಳ ಅವರಂತಹ ಶಕ್ತಿ ಬಿಜೆಪಿಯಲ್ಲಿ ಇರಲೇಬೇಕು. ಪಕ್ಷದಲ್ಲಿರುವ ಸಣ್ಣಪುಟ್ಟ ವೈಮನಸ್ಸುಗಳನ್ನು ವರಿಷ್ಠರು ಕುಳಿತು ಬಗೆಹರಿಸುವ ಕೆಲಸ ಮಾಡಬೇಕು. ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆತರಲೇಬೇಕು ಎಂದು ಲಿಂಗಾಯತ ವಕೀಲರು, ಹಿಂದೂ ಕಾರ್ಯಕರ್ತರು ಆಗ್ರಹಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಒತ್ತಾಯಿಸಿದರು.