
ಧಾರವಾಡ
ಹಿಂದಿನ ವರ್ಷಗಳ ಮಾಹಿತಿ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲಾಡಳಿತದಿಂದ 2025-2026 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 78 ಗ್ರಾಮಗಳನ್ನು ಗುರುತಿಸಲಾಗಿದ್ದು, ತಹಶೀಲ್ದಾರ ಮತ್ತು ತಾಲೂಕು ಪಂಚಾಯತ ಅಧಿಕಾರಿಗಳು ಅತ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಫ್ರಭು ಅವರು ಖಡಕ್ ಸೂಚನೆ ನೀಡಿದ್ದಾರೆ.
ಇಂದು ಧಾರವಾಡ ಜಿಲ್ಲಾಧಿಕಾ ರಿಕಚೇರಿ ಸಭಾಭವನದಲ್ಲಿ 2025 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳ ಕುರಿತು ಪೂರ್ವಸಿದ್ಧತೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ ಮಾತನಾಡಿದ ಅವರು, ಎಲ್ಲ ತಾಲೂಕು ಪಂಚಾಯತ ಕಚೇರಿ ಸೇರಿ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಸರಬರಾಜು ಕುರಿತ ದೂರುಗಳನ್ನು ಸ್ವೀಕರಿಸಿ, ತುರ್ತು ಕ್ರಮವಹಿಸಲು ಸಾಧ್ಯವಾಗುವಂತೆ ಸಹಾಯವಾಣಿ ಆರಂಭಿಸಬೇಕೆಂದು ಸೂಚಿಸಿದರು.
ಜತೆಗೆ ಬೇಸಿಗೆ ಅವಧಿಯ ಮಾರ್ಚ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಧಾರವಾಡ ತಾಲೂಕಿನ 13, 10 ಮತ್ತು 7 ಗ್ರಾಮಗಳು ಸೇರಿ 30 ಗ್ರಾಮಗಳಲ್ಲಿ, ಅಳ್ಳಾವರ ತಾಲೂಕಿನ 1, 1 ಮತ್ತು 2 ಗ್ರಾಮಗಳು ಸೇರಿ 4 ಗ್ರಾಮಗಳಲ್ಲಿ, ಹುಬ್ಬಳ್ಳಿ ತಾಲೂಕಿನ 8, 5 ಮತ್ತು 6 ಗ್ರಾಮಗಳು ಸೇರಿ ಒಟ್ಟು 19 ಗ್ರಾಮಗಳಲ್ಲಿ, ಕಲಘಟಗಿ ತಾಲೂಕಿನ 3, 7 ಮತ್ತು 6 ಗ್ರಾಮಗಳು ಸೇರಿ ಒಟ್ಟು 16 ಗ್ರಾಮಗಳು, ಕುಂದಗೋಳ ತಾಲೂಕಿನ 4, 3 ಮತ್ತು 2 ಗ್ರಾಮಗಳು ಸೇರಿ 9 ಗ್ರಾಮಗಳು. ಹೀಗೆ ಮೂರು ತಿಂಗಳ ಅವಧಿಯಲ್ಲಿ ಯಾವ ಗ್ರಾಮಗಳಲ್ಲಿ ಯಾವ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಿ ಸಮೀಕ್ಷೆ ಮಾಡಿ, ಒಟ್ಟು 78 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಬರೋ ಬೇಸಿಗೆ ಕಾಲದಲ್ಲಿ ಯಾವುದೇ ರೀತಿಯ ಕುಡಿಯುವ ನೀರು ಸೇರಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ತಿಳಿಸಿದರು.