
ಧಾರವಾಡ
ಪದವಿ ಹಂತದಲ್ಲಿಯೇ ಯುವಕ, ಯುವತಿಯರು ಐಎಎಸ್, ಐಪಿಎಸ್‍ದಂತಹ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಬೇಕು. ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯುವ ಚೇತನದಲ್ಲಿ ಭಾಗವಹಿಸಿ, ಸಾಧಿಸುವ ಛಲದಿಂದ ಪ್ರತಿಜ್ಞೆ ಮಾಡಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಫ್ರಭು ಅವರು ಯುವ ಸಮುದಾಯಕ್ಕೆ ಕರೆ ನೀಡಿದರು.
ಧಾರವಾಡದ ಕೆಸಿಡಿ ಆವರಣದಲ್ಲಿರುವ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ವಸತಿನಿಲಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಕುರಿತು ಆರಂಭವಾಗಿರುವ ಯುವ ಚೇತನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಪ್ರತಿ ತಿಂಗಳು ಯುವಚೇತನ ಕಾರ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ತಜ್ಞರು, ತರಬೇತಿದಾರರು ಮತ್ತು ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳ ಮೂಲಕ ಮಾಹಿತಿ ನೀಡಲಿದ್ದಾರೆ. ವಸತಿ ನಿಲಯಗಳಲ್ಲಿ ಬಡ, ಮಧ್ಯಮ ಕುಟುಂಬದ ವಿದ್ಯಾರ್ಥಿಗಳು ಹೆಚ್ಚಾಗಿ ಇರುವದರಿಂದ ಅವರಿಗೆ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಉಚಿತವಾಗಿ ಈ ಯುವ ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಪದವಿ ಶಿಕ್ಷಣದ ಹಂತ ಜೀವನದಲ್ಲಿ ಬಹು ಮುಖ್ಯವಾದ ಕಾಲಘಟ್ಟ. ವಿದ್ಯಾರ್ಥಿಗಳು ಓದು, ಸಾಧನೆ ಬಿಟ್ಟು ಬೇರೆಡೆ ಚಿಂತಿಸಬಾರದು. ಜೀವನದ ಗುರಿ ತಲುಪಿದಾಗ ನೆಮ್ಮದಿ ಸೀಗುತ್ತದೆ. ವಿದ್ಯಾರ್ಥಿಗಳಲ್ಲಿ ಮುನ್ನುಗ್ಗುವ, ಸಾಧನೆ ಮಾಡುವ ಹಠ, ಛಲ ಇರಬೇಕೆಂದು ವಿದ್ಯಾರ್ಥಿ ಸಮೂಹಕ್ಕೆ ತಿಳಿ ಹೇಳಿದರು.