
ಧಾರವಾಡ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098,112 ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಕಲಘಟಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆಗಾಗಿ ಇರುವ ಬಾಲ ನ್ಯಾಯ ಕಾಯ್ದೆ-2015, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ-2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಮಕ್ಕಳ ಕುರಿತು ಸೈಬರ್ ಕ್ರೈಂ ಅಪರಾಧಗಳು ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಇಂದು (ಫೆ.12) ಗುಡ್ ಕಲಘಟಗಿ ನ್ಯೂಸ್ ಕಾಲೇಜು ಸಭಾ ಭವನದಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸದಸ್ಯ ಶೇಖರಗೌಡ ರಾಮತ್ನಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಬಾಲನ್ಯಾಯ ಕಾಯ್ದೆಯ ಬಗ್ಗೆ ಮಾಹಿತಿಯನ್ನು ತಿಳಿದಿಕೊಂಡಿರುವುದು ಅತೀ ಅವಶ್ಯವಾಗಿದೆ, ಈ ಕುರಿತು ಎಲ್ಲರೂ ಮಾಹಿತಿಯನ್ನು ಪಡೆಯಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಶಿಕ್ಷಣ ಇಲಾಖೆಯ ಅತೀ ದೊಡ್ಡ ಜವಾಬ್ದಾರಿಯಾಗಿದೆ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಎಷ್ಟೇ ಅರಿವನ್ನು ನೀಡಿದರೂ ಸಹಿತ, ಕೇವಲ ಒಂದು ಇಲಾಖೆಯಿಂದ ಮಾತ್ರ ಕ್ರಮಕೊಗೊಳ್ಳುತ್ತಿದ್ದು, ಇನ್ನುಳಿದ ಇಲಾಖೆಯವರು ಸಹಿತ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಮುಖ್ಯವಾಗಿ ಮಕ್ಕಳು ಸಹಿತ ಇದರಲ್ಲಿ ಬಲಿಯಾಗುತ್ತಿರುವುದು ವಿಷಾದನೀಯ. ಆದ ಕಾರಣ ಸೈಬರ್ ಕ್ರೈಮ್ ಅಪರಾಧಗಳ ಕುರಿತು ಜನಸಾಮಾನ್ಯರಲ್ಲಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಶಾಲೆಗಳಲ್ಲಾಗಲಿ, ವಸತಿ ನಿಲಯಗಳಲ್ಲಿಯಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಕಂಡು ಬಂದಲ್ಲಿ ತಕ್ಷಣ ಈ ಕುರಿತು ಪ್ರಕರಣ ದಾಖಲಿಸಿ ಮಗುವಿಗೆ ನ್ಯಾಯಕೊಡಿಸುವಲ್ಲಿ ಎಲ್ಲರೂ ಭಾಗಿದಾರರಾಗಬೇಕು ಎಂದು ತಿಳಿಸಿದರು.
ಕಲಘಟಗಿ ಗುಡ್ ನ್ಯೂಸ್ ಕಾಲೇಜು ಕಾರ್ಯದರ್ಶಿ ಬ್ರದರ ವರ್ಗಿಸ್ ಕೆ.ಜೆ. ಅವರು ಮಾತನಾಡಿ, ಸದರಿ ಕಾರ್ಯಕ್ರಮವು ಮಕ್ಕಳಿಗೆ ಅತೀ ಉಪಯುಕ್ತವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಎಲ್ಲ ಶಾಲೆ ಕಾಲೇಜುಗಳಲ್ಲಿ ಹಮ್ಮಿಕೊಂಡು ಅರಿವು ಮೂಡಿಸುವುದು ಅತೀ ಅವಶ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ಅವರು ಮಾತನಾಡಿ, ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಆಧ್ಯ ಕರ್ತವ್ಯವಾಗಿದೆ. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು ಯಾವುದಾದರೂ ಕಂಡು ಬಂದಲ್ಲಿ ತಕ್ಷಣ 1098,112 ಕರೆ ಮಾಡುವುದು. ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಗೆ ಸಂಪರ್ಕಿಸುವುದು. ಪಾಲನೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳನ್ನು ಬಾಲಮಂದಿರಗಳಿಗೆ ದಾಖಲು ಮಾಡಿ ಇಲಾಖೆಯಿಂದ ಪುನರ್ವಸತಿಗೊಳಿಸಲಾಗುತ್ತಿದೆ. ಜೈವಿಕ ತಂದೆ ತಾಯಿಗಳು ಇಲ್ಲದ ಸಂದರ್ಭದಲ್ಲಿ ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿ ಮಗುವಿಗೆ ಕುಟುಂಬ ವಾತಾವರಣವನ್ನು ಕಲ್ಪಿಸುವಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.
ಸೈಬರ್ ಕ್ರೈಮ್ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸಪೆಕ್ಟರ್ ಅಭಿಜಿತ ಅವರು ಸೈಬರ ಕ್ರೈಮ್ ಅಪರಾಧಗಳ, ಮೊಬೈಲ್ ಬಳಕೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಕಲಘಟಗಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಉಪನ್ಯಾಸ ನೀಡಿದರು. ಲೀಗಲ್ ಕಂ ಪ್ರೊಬೇಶನ್ ಆಫೀಸರ್ ನೂರಜಹಾನ್ ಕಿಲ್ಲೇದಾರ ಅವರು ಪೋಕ್ಸೊ ಕಾಯ್ದೆ-2012ರ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಆಪ್ತಸಮಾಲೋಚಕರು ವಿಶಾಲಾ ಕಾನಪೇಟ ಅವರು ಮಕ್ಕಳ ರಕ್ಷಣಾ ನೀತಿ-2016, ಪರಿಷ್ಕರಣೆ 2023 ರ ಕುರಿತು ವಿವರಿಸಿ ಸಮಾಜ ಕಾರ್ಯಕರ್ತೆ ಶ್ವೇತಾ ಕಿಲ್ಲೇದಾರ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ತಿದ್ದುಪಡಿ ಕಾಯ್ದೆ 2016ರ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಾರ್ಯಕರ್ತ ಕರೆಪ್ಪ ಕೌಜಲಗಿ ಅವರು ಬಾಲನ್ಯಾಯ ಕಾಯ್ದೆ 2015 ರ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಲಘಟಗಿ ತಹಶೀಲ್ದಾರರು ಗ್ರೇಡ್ -2 ಬಸವರಾಜ ಹೆಂಕಣ್ಣವರ, ಕಲಘಟಗಿ ಪಿ.ಎಸ್.ಐ. ಸಿ.ಎನ್.ಕರವೀರಪ್ಪನವರ, ಕಲಘಟಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ವಾಯ್. ಸಾವಂತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳು ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕ್ಷೇತ್ರ ಕಾರ್ಯಕರ್ತರರಾದ ಭಾರತಿ ಬಂಡಿ ನಿರೂಪಿಸಿ, ಮಹಮ್ಮದ ಅಲಿ ತಹಶೀಲ್ದಾರ ಮತ್ತು ಶಂಕರ ಬೋಸಲೆ ವಂದಿಸಿದರು.