
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ಕಟ್ಟುವ ಕಟ್ಟುತ್ತಿರುವ ಬಗ್ಗೆ ದೂರು ನೀಡಿದರೂ ಮಾಲೀಕರ ಜೊತೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳದ ಪಿಡಿಓ ರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಸರ್ಕಾರಕ್ಕೆ ವಿಶ್ವನಾಯಕ ಡಾ. ಬಿ.ಆರ್ ಅಂಬೇಡ್ಕರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಶಿವರಾಜ್ ಆಗ್ರಹಪಡಿಸಿದರು.
‘ತಾವರೆಕೆರೆ ಹೋಬಳಿ ಕುರುಬರಹಳ್ಳಿಯ ಸರ್ವೇ ನಂಬರ್ 161ರ ಎಂ.ಎಂ. ಸ್ಕೂಲ್ ಆಫ್ ನರ್ಸಿಂಗ್ ನವರು ಯಾವುದೇ ಪ್ರಾಧಿಕಾರದ ಅನುಮತಿ ಪಡೆಯದೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪಿಡಿಓ ರವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯಾರಾದರೂ ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ’, ಎಂದು ಹೇಳಿದರು.
ಈ ಗ್ರಾಮ ಪಂಚಾಯಿತಿಯಲ್ಲಿ ಬಲಾಢ್ಯರಿಗೆ ಮಾತ್ರ ಕೆಲಸಗಳಾಗುತ್ತಿದ್ದು ಜನ ಸಾಮಾನ್ಯರ ದೂರುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಲೋಕಾಯುಕ್ತದವರು ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ಅಕ್ರಮಗಳಲ್ಲಿ ಭಾಗಿಯಾಗುತ್ತಿರುವ ಪಿಡಿಒ ರವರ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡವನ್ನು ಒಡೆದು ಹಾಕಬೇಕು’, ಆಗ್ರಹ ಪಡಿಸಿದರು.
ಅಧಿಕಾರಿಗಳು ಕಟ್ಟಡದ ಮಾಲೀಕರೊಂದಿಗೆ ಶಾಮೀಲಾಗಿ ಅಕ್ರಮದ ಬಗ್ಗೆ ಕೇಳಿದರೆ ಸೀಲ್ ಫೋರ್ಜರಿ ಆಗಿದೆ ಅಂತ ಪಿಡಿಓ ಹೇಳುತ್ತಾರೆ. ಅಂದರೆ ಸೀಲ್ ಫೋರ್ಜರಿಯಾಗಿದ್ದರೂ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’,
ಗ್ರಾಮ ಪಂಚಾಯಿತಿ ಕಛೇರಿಗೆ ಸಂಘಟನೆಯಿಂದ ಬಂದವರಿಗೆ ಯಾವುದೇ ಉತ್ತರ ಕೊಡದ ಇವರು ಸಾರ್ವಜನಿಕರಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ. ಹಾಗಾಗಿ ಅಕ್ರಮ ಕಟ್ಟಡವಾಗಿ ನಿರ್ಮಾಣವಾಗುತ್ತಿರುವ ಎಂ.ಎಂ ಸ್ಕೂಲ್ ಆಫ್ ನರ್ಸಿಂಗ್ ಕಟ್ಟಡವನ್ನು ಒಡೆದು ಹಾಕಿ ಅಕ್ರಮದ ಪಾಲುದಾರರಾಗಿರುವ ಪಿಡಿಓ ರವರನ್ನು ಸೇವೆಯಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’, ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ನಾಯಕ ಡಾ.ಬಿಆರ್ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳಾದ ಪ್ರೇಮ, ಸುಕನ್ಯ, ಮಲ್ಲಿಕಾರ್ಜುನ್ ರೆಡ್ಡಿ, ಮಂಜು, ಪುಷ್ಪ, ಕಿರಣ್, ಅಂಜುಶ್ರೀ ಮುಂತಾದವರು ಭಾಗಿಯಾಗಿದ್ದರು.