
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ತಾಯಿಯ ಸ್ಮಾರಕವನ್ನು ದೇಗುಲದ ರೀತಿ ನಿರ್ಮಿಸುವುದರ ಮೂಲಕ ಎನ್ ಮೂರ್ತಿ ಅವರು ತಾಯಿಯ ಋಣವನ್ನು ತೀರಿಸುವ ಪ್ರಯತ್ನ ಮಾಡಿದ್ದಾರೆ. ಮಾತೃದೇವೋಭವ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ’, ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನೆಲಮಂಗಲ ಸಮೀಪದ ಚಿಕ್ಕಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಡಾ. ಎನ್ ಮೂರ್ತಿರವರ ತಾಯಿಯವರಾದ ಮಾತಾಜಿ ತಿಮ್ಮಕ್ಕನವರ ಐಕ್ಯಸ್ಥಳದ ಸ್ಮಾರಕ ಹಾಗೂ ಮೈತ್ರಿವನದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಇದೇ ವೇಳೆ ಡಾ. ಎನ್ ಮೂರ್ತಿಯವರು ಬರೆದಿರುವ ಬಡವರವ್ವ ಮಾತಾಜಿ ತಿಮ್ಮಕ್ಕ ಪುಸ್ತಕ ಬಿಡುಗಡೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಡಾ. ಎನ್ ಮೂರ್ತಿ ಮಾತನಾಡಿ, ‘ನಾವೆಷ್ಟೇ ಸಾಧನೆ ಮಾಡಿದರೂ ಅಮ್ಮ ಅಂತಾ ಬಂದಾಗ ಎಲ್ಲವೂ ನಗಣ್ಯ. ಅವರ ನೆನಪನ್ನು ಸ್ಮಾರಕದ ರೂಪದಲ್ಲಿ ಕಣ್ತುಂಬಿಕೊಳ್ಳುವುದು ನನ್ನ ಆಸೆ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲನಹಳ್ಳಿ ಮಠದ ಪೀಠಾಧಿಪತಿಗಳಾದ ಡಾ. ಸಿದ್ದರಾಜು ಸ್ವಾಮೀಜಿ, ಕರ್ನಾಟಕ ಬಹುಜನ ಚಳುವಳಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪ, ಎಸ್.ಡಿ.ಪಿ.ಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಕೆ ರಾಮಯ್ಯ ಮಾಸ್ಟರ್, ಮುನಿರಾಜು, ಕೇಶವಮೂರ್ತಿ, ಡಾ. ಭೀಮರಾಜ್, ಸೇರಿದಂತೆ ಹಲವಾರು ದಲಿತ ಸಂಘಟನೆ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.