
ಅಹಿಂಸೆಯನ್ನು ಪರಮಧರ್ಮವನ್ನಾಗಿ ಸ್ವೀಕರಿಸಿ ಸರ್ವ ಪ್ರಾಣಿಗಳನ್ನೂ ಪ್ರೀತಿಸಲು ಕಲಿಸಿದ ಜೈನ ತೀರ್ಥಂಕರರ ಉಪದೇಶಗಳನ್ನು ಮನೆ ಮನೆಗೆ ತಲುಪಿಸಿ, ದೇಶ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸಬೇಕೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದರು.
ಹುಬ್ಬಳ್ಳಿ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಒಂಭತ್ತು ತೀರ್ಥಂಕರರ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂರಾರು ವರ್ಷಗಳ ಹಿಂದೆ ತೀರ್ಥಂಕರರು ಬೋಧಿಸಿದ ಅಹಿಂಸೆ, ಅಪರಿಗ್ರಹ, ಶಾಂತಿ, ತ್ಯಾಗ ಮೊದಲಾದ ತತ್ವಗಳು ಇಂದು ಎಂದಿಗಿಂತ ಪ್ರಸ್ತುತವಾಗಿವೆ. ಅವುಗಳನ್ನು ಪ್ರಚಾರ ಮಾಡಿ ಜನರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ.
ಒಂದೇ ವೇದಿಕೆಯ ಮೇಲೆ ಇಷ್ಟು ದೊಡ್ಡ ಸಾಧು ಸಂತರ ದರ್ಶನವಾಗಬೇಕಾದರೆ ಅದಕ್ಕೂ ಪುಣ್ಯ ಬೇಕು ಅಲ್ಲದೇ ದೈವ ಕೃಪೆಯೂ ಅಗತ್ಯ ಎಂದರು. ಇದೇವೇಳೆ ಭಗವಾನ್ ಪಾರ್ಶ್ವನಾಥರ ಪುಟ್ಟ ಶಿಲಾ ಪ್ರತಿಮೆಗೆ ಓಂ ಬಿರ್ಲಾ ಮಹಾಮಸ್ತಕಾಭಿಷೇಕ ನೆರವೇರಿಸಿದರು. ಶುದ್ಧ ಪವಿತ್ರ ಜಲ, ಕಬ್ಬಿನ ರಸ, ಹಳದಿ, ಕುಂಕುಮ, ಗಂಧ ಮಿಶ್ರಿತ ಜಲ ತುಂಬಿದ ಕಲಶಗಳಿಂದ ಅಭಿಷೇಕ ಮಾಡಿ, ಪುಷ್ಪಾಂಜಲಿ ಅರ್ಪಿಸಿದರು. ಇದಕ್ಕೂ ಮೊದಲು ಶ್ರೀಮಂತರ ಪಂಡಿತರು ಓಂ ಬಿರ್ಲಾರಿಗೆ ಶಾಲು ಹೊದಿಸಿ ಪೇಟ ಹಾಕಿ ಸ್ವಾಮೀಜಿಗಳು ಆರ್ಶೀವಾದ ನೀಡಿ ಗೌರವಿಸಿದರು.