
ಪಬ್ಲಿಕ್ ರೈಡ್ ಧಾರವಾಡ
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತಾಗಿ ನೀಡಿದ್ದಾರೆನ್ನಲಾದ ಹೇಳಿಕೆ ವಿರೋಧಿಸಿ ದಲಿತಪರ ಸಂಘಟನೆಗಳು ಇಂದು ಹುಬ್ಬಳ್ಳಿ, ಧಾರವಾಡ ಅವಳಿನಗರ ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಧಾರವಾಡದಲ್ಲಿ ದಲಿತ ಪರ ಸಂಘಟನೆಯ ಮುಖಂಡರು ಬೀದಿಗೆ ಇಳಿದು ಪ್ರತಿಭಟನೆ ಪ್ರಾರಂಭಿಸಿದರು.
ನಗರದ ಜ್ಯುಬಿಲಿ ವೃತ್ತದಲ್ಲಿ ಬೆಳ್ಳಂಬೆಳಿಗ್ಗೆಯೇ ದಲಿತ ಮುಖಂಡರಿಂದ ಪ್ರತಿಭಟನೆ ನಡೆಸಿ, ಅಮಿತ್ ಶಾ ಅವರ ಪ್ರತಿಕೃತಿಗೆ ದಹಿಸಿ ಕೇಂದ್ರ ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ಇನ್ನೂ ಬಂದ್ ಕರೆ ಹಿನ್ನಲೆ ಧಾರವಾಡದ ಭಾಗಶಃ ಅಂಗಡಿ, ಮುಂಗಟ್ಟುಗಳು ಬಂದ ಆಗಿವೆ. ಧಾರವಾಡದ ಜ್ಯುಬಿಲಿ ವೃತ್ತ ಹಾಗೂ ಪ್ರಮುಖ ರಸ್ತೆಗಳು ವಾಹನಗಳಿಲ್ಲದೇ ಬಿಕೋ ಎನ್ನುತ್ತಿವೆ. ಕೆಲ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತ ನಿಂತಿರುವ ದೃಶ್ಯಗಳೂ ಸಾಮನ್ಯವಾಗಿದ್ದವು.
ಇನ್ನು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪಿಯು ಕಾಲೇಜುಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂದ ದೃಶ್ಯಗಳೂ ಕಂಡು ಬಂದವು. ಕೆಲ ಸಾರ್ವಜನಿಕರು ಬಂದ್ ಅರಿವಿಲ್ಲದೇ ಧಾರವಾಡಕ್ಕೆ ಬಂದಿದ್ದು ವಾಹನಗಳಿಗಾಗಿ ಕಾಯುತ್ತ ನಿಂತ ಪ್ರಸಂಗ ನಡೆದಿದೆ. ಒಟ್ಟಾರೆ ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆಯೇ ಪ್ರತಿಭಟನೆ ಕಾವು ಪಡೆದುಕೊಂಡಿದೆ.