April 18, 2025

ಧಾರವಾಡ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ9 ಆರೋಪಿ ಧನರಾಜ್ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ರಾತ್ರಿ ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಆರೋಪಿ ಎಲೆಕ್ಟ್ರಿಕಲ್ ಮೆಗ್ಗರ್ ಡಿವೈಸ್ ಪೂರೈಕೆ ಮಾಡಿದ್ದ ಆರೋಪ ಇವರ ಮೇಲೆ ಬಂದಿತ್ತು. ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿತ್ತು

. ಅದೇ ರೀತಿ ಎ9 ಆರೋಪಿ ಧನರಾಜ್‌ನನ್ನು ಕಳೆದ ಆಗಸ್ಟ್ 29 ರಂದು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಈ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಿದೆ. ಧಾರವಾಡ ಜೈಲಿನಲ್ಲಿದ್ದ ಎ9 ಆರೋಪಿ ಧನರಾಜ್‌ನಿಗೂ ಜಾಮೀನು ದೊರೆತಿದ್ದು, ಮಂಗಳವಾರ ರಾತ್ರಿ ಆತ ಧಾರವಾಡ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾನೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಈ ಆರೋಪಿ ನಟ ದರ್ಶನ್ ಅವರ ಸಾಕು ನಾಯಿಗಳನ್ನು ನೋಡಿಕೊಳ್ಳುತ್ತಿದ್ದ. ಧಾರವಾಡ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ಧನರಾಜ್‌ನಿಗೆ 8629 ಕೈದಿ ಸಂಖ್ಯೆ ನೀಡಲಾಗಿತ್ತು. ಇಂದು ಧಾರವಾಡ ಕಾರಾಗೃಹಕ್ಕೆ ಜಾಮೀನು ಪ್ರತಿ ಮತ್ತು ಷರತ್ತುಗಳ ಪ್ರತಿ ಲಭ್ಯವಾದ ಹಿನ್ನೆಲೆಯಲ್ಲಿ ಧನರಾಜ್‌ನನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಕಾರಾಗೃಹದಿಂದ ಬೆಳಗಾವಿ ರಸ್ತೆವರೆಗೂ ಧನರಾಜ್ ನಡೆದುಕೊಂಡೇ ಹೊರಗಡೆ ಹೋಗಿದ್ದಾನೆ. ಕಾರಾಗೃಹದ ಆವರಣದಲ್ಲಿ ಆತನ ಸಂಬಂಧಿಗಳು ಯಾರೂ ಬಂದಿರಲಿಲ್ಲ. ಮಾಧ್ಯಮದವರ ಜೊತೆ ಧನರಾಜ್ ಮಾತನಾಡಲು ನಿರಾಕರಿಸಿದ್ದರು. ಕಾರಾಗೃಹದಿಂದ ಬೆಳಗಾವಿ ರಸ್ತೆವರೆಗೂ ನಡೆದುಕೊಂಡೇ ಹೋದ ಧನರಾಜ್‌ನನ್ನು ಅಲ್ಲಿಂದ ಆತನ ಸಂಬಂಧಿಗಳು ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Leave a Reply

Your email address will not be published. Required fields are marked *

error: Content is protected !!