
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಸಮೀಪದ ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿರುವ ನ್ಯೂ ಇಂಡಿಯನ್ ನ್ಯಾಷನಲ್ ಹೈಸ್ಕೂಲ್ ವತಿಯಿಂದ 69ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ ಹಾಗೂ ಜಾನಪದ ಸಾಂಸ್ಕೃತಿಕ ಹಬ್ಬ ವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂ ಇಂಡಿಯನ್ ನ್ಯಾಷನಲ್ ಹೈಸ್ಕೂಲ್ ನ ಚೇರ್ಮನ್ ಕೆ ಹರಿ ಮಾತನಾಡಿ, ‘ಸ್ಥಾನಮಾನದಲ್ಲಿ ನಾವೆಷ್ಟೇ ಮೇಲಕ್ಕೇರಿದರೂ ಅದಕ್ಕೆ ಮೇಲೆ ನಮ್ಮ ಕನ್ನಡದ ಬಾವುಟವು ರಾರಾಜಿಸುತ್ತಿರಬೇಕು. ಹಾಗೆಯೇ ಎಲ್ಲರ ಮನಗಳಲ್ಲಿ ಕನ್ನಡ ಮನೆ ಮಾಡಬೇಕು’, ಎಂದು ಹೇಳಿದರು.
ಜನಪ್ರಿಯ ಜಾನಪದ ಗಾಯಕರಾದ ಕುಣಿಗಲ್ ರಾಮಚಂದ್ರ ರವರು ಅತಿಥಿಗಳಾಗಿ ಆಗಮಿಸಿ ಜಾನಪದ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಜಾನಪದ ಹಾಡುಗಳ ಮೂಲಕ ನೆರೆದಿದ್ದವರಲ್ಲಿ ಜಾನಪದ ಸೊಗಡು ಕಣ್ಮುಂದೆ ಬಂದು ಮನಸೂರೆಗೊಳ್ಳುವಂತೆ ಮಾಡಿದರು. ಒಂದು ವಾರಗಳ ಕಾಲ ಜಾನಪದ ಹಾಡುಗಳ ತರಬೇತಿ ಪಡೆದ ವಿದ್ಯಾರ್ಥಿಗಳು ಸಮಾರಂಭದಲ್ಲಿ ಜಾನಪದ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಇದೇ ವೇಳೆ ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ ಮಾಡಿರುವ ‘ಅಲುಮಿನಿ ಅಸೋಷಿಯೇಶನ್’ ಸಂಘವನ್ನು ಉದ್ಘಾಟನೆ ಮಾಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಅದಕ್ಕೆ ಕಾರಣರಾದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ನಿರ್ಮಲಾ, ಕಾರ್ಯದರ್ಶಿ ಎ ಶಿವರಾಮಯ್ಯ, ಖಜಾಂಚಿ ಸಿ ಚೆಲುವರಾಜ್ ಸೇರಿದಂತೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ, ಶಿಕ್ಷಕಿಯರು, ಹಳೆಯ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.