
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ : ರೈತರ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹೆಸರಘಟ್ಟ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ’, ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಸಮೀಪದ ಹೆಸರಘಟ್ಟದ ಪ್ರವಾಸಿ ಮಂದಿರದ ಬಳಿ ಗುರುವಾರ ಏರ್ಪಡಿಸಿದ್ದ ಖಂಡನಾ ನಿರ್ಣಯ ಸಭೆಯಲ್ಲಿ ಮಾತನಾಡಿದ ಅವರು, ‘1972ರ ಸೆಕ್ಷನ್ 3ಎ ಪ್ರಕಾರ ಸರ್ಕಾರವು 5010 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲನ್ನು ಸಮರ್ಪಕವಾದ ಸಮೀಕ್ಷೆ ನಡೆಸದೆ, ಈ ಭಾಗದ ರೈತರ ಅಭಿಪ್ರಾಯ ಸಂಗ್ರಹಿಸದೆ ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿರುವುದು ಈ ಭಾಗದ ರೈತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಸಗಿರುವ ಮಹಾಪ್ರಮಾದ ವಾಗಿದೆ, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಹೆಸರಘಟ್ಟ ಪ್ರದೇಶ ವ್ಯಾಪ್ತಿಯy ಐದು ಪಂಚಾಯಿತಿ ಅಧ್ಯಕ್ಷರು, ರೈತ ಸಂಘಗಳು, ಕನ್ನಡಪರ ಸಂಘ ಸಂಸ್ಥೆಗಳು ಸೇರಿ ಸರ್ಕಾರದ ಕ್ರಮವನ್ನು ಕುರಿತು ಖಂಡನಾ ನಿರ್ಣಯ ಮಂಡಿಸಲು ನಿರ್ಧಾರ ಕೈಗೊಂಡಿದ್ದೇವೆ’, ಎಂದರು.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆಸಿದ ಸಭೆಯಲ್ಲಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್ ಸೇರಿದಂತೆ ಈ ಭಾಗದ ಐದೂ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರೆಲ್ಲರೂ ಭಾಗವಹಿಸಿ, ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿ ಸ್ಥಳೀಯ ಪಂಚಾಯಿತಿಗಳಿಂದ ವರದಿ ಪಡೆಯಲು ತಿಳಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಅಧಿಕಾರಿಗಳಿಗೆ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದರು. ಆದರೆ ಕೆಲ ಎನ್‌ಜಿಓ ಸಂಸ್ಥೆಗಳು ಮತ್ತು ಹೊರಗಿನ ವ್ಯಕ್ತಿಗಳು ಎಸಿ ರೂಮ್ ನಲ್ಲಿ ಕುಳಿತು ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ. ಮೊಬೈಲ್ ಉಪಯೋಗಿಸುವುದನ್ನು ತಿಳಿಯದ ರೈತರು ಹೇಗೆ ತಾನೇ ಮೊಬೈಲ್ ಆಪ್ ನಲ್ಲಿ ಈ ಕುರಿತು ಅಪ್ಡೇಟ್ ಮಾಡಲು ಸಾಧ್ಯ’, ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಮಾಡುವುದರಿಂದ ಸರ್ಕಾರವು ಯಾವಾಗ ಬೇಕಾದರೂ ರಸ್ತೆಯನ್ನು ಮುಚ್ಚಬಹುದು ಹಾಗೂ ಜಾನುವಾರುಗಳಿಗೆ ನಿರ್ಬಂಧ ಏರಬಹುದು. ಈ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದ ಯಲಹಂಕದ ಕೆಲ ಮುಖಂಡರು ಬುಧವಾರ ಸುದ್ದಿಗೋಷ್ಠಿ ನಡೆಸಿ ಜನರಿಗೆ ಯಾವುದೇ ತೊಂದರೆಯಾಗು ವುದಿಲ್ಲ’, ಎಂಬ ಬೇಕಾಬಿಟ್ಟಿ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಪರ ವಹಿಸಿಕೊಂಡು ಮಾತನಾಡುತ್ತಿರುವ ಈ ವ್ಯಕ್ತಿಗಳಿಗೆ ಮತ್ತು ಕೆಲವು ಸಂಘಸಂಸ್ಥೆಗಳ ವ್ಯಕ್ತಿಗಳಿಗೆ ಜನರಿಗೆ ಅನುಕೂಲ ಮಾಡಿ ಕೊಡುವ ಯಾವುದೇ ಸದುದ್ದೇಶವಿಲ್ಲ. ಬದಲಿಗೆ ಸರ್ಕಾರದ ನಿರ್ಧಾರವನ್ನು ತಮ್ಮ ಹೆಸರಲ್ಲಿ ಕ್ಲೈಮ್ ಮಾಡಿಕೊಳ್ಳಲು ಮತ್ತು ತಮ್ಮ ಬಯೋಡಾಟಾದಲ್ಲಿ ಹಾಕಿಕೊಳ್ಳುವುದಕ್ಕಾಗಿ ಮಾತ್ರ ಈ ರೀತಿ ಹೇಳುತ್ತಿದ್ದಾರೆ.
ಸದರಿ ವಿಷಯ ವಿರೋಧಿಸಿ ಹೆಸರಘಟ್ಟ ಭಾಗದ ರೈತರು, ಸ್ಥಳೀಯ ನಾಗರೀಕರು ಮಾಡಿರುವ ಹೋರಾಟದ ವರದಿಗಳು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಇದನ್ನು ರಾಜ್ಯ ಸರ್ಕಾರದ ಪ್ರಮುಖರು, ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿಲ್ಲವೇ ಎಂದು ಪ್ರಶ್ನಿಸಿದ ಅವರು ಸರ್ಕಾರ ಏನಾದರೂ ಈ ನಿರ್ಧಾರವನ್ನು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಉಪಾಧ್ಯಕ್ಷ .ಕೆ.ರಾಜಣ್ಣ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ, ಗ್ರಾ.ಪಂ.ಅಧ್ಯಕ್ಷರಾದ ಸಂಜೀವಯ್ಯ, ಪುಷ್ಪಲತಾ, ಲಲಿತಾ, ಬ್ಯಾತ ಸುರೇಶ್, ಅಶ್ವತ್ಥ್ ಬಿ., ಕೆ.ಎಂ.ಅರಸೇಗೌಡ ಸೇರಿದಂತೆ ವಿವಿಧ ಗ್ರಾ.ಪಂ.ಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಂಘಸಂಸ್ಥೆಗಳ ಮುಖಂಡರಿದ್ದರು.