
ಹುಬ್ಬಳ್ಳಿ
ಉತ್ತರ ಪ್ರದೇಶದ ಗಾಜಿಯಾಬಾದಿನ ನಿವಾಸಿ ಯತಿ ನರಸಿಂಘಾನಂದ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಮಾತನಾಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಂಜುಮನ್ ಇ ಇಸ್ಲಾಂ ಹುಬ್ಬಳ್ಳಿಯ ಸಂಸ್ಥೆ ನೇತೃತ್ವದಲ್ಲಿ ನಗರದ ತಹಶಿಲ್ದಾರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಯತಿ ನರಸಿಂಘಾನಂದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಪವಿತ್ರ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಕುರಿತು ಅತೀವ ಕೀಳುರುಮೆಯ ಹೇಳಿಕೆ ನೀಡುವುದರ ಜೊತೆಗೆ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತ್ವಕ್ಕೆ ಧಕ್ಕೆ ತಂದಿರುತ್ತಾರೆ.
ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ.
ಈ ಕೂಡಲೇ ಯತಿ ನರಸಿಂಘಾನಂದ ಸ್ವಾಮೀಜಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.