April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಪೀಣ್ಯ ಎರಡನೇ ಹಂತದ ಸರ್ಕಲ್ ನಲ್ಲಿರುವ ಪುರಾತನವಾ ಸಂಕಷ್ಟಹರ ಗಣಪತಿ ದೇವಸ್ಥಾನವನ್ನು ನಾಗರಾಜ್ ಎಂಬುವವರು ಏಕಾಏಕಿ ಜೆಸಿಬಿಯಿಂದ ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶೇಂಗಾನಾಡು ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ತಿಮ್ಮರಾಜ್ ಗೌಡ್ರು ಹಾಗೂ ಅಹಿಂದ ಹಕ್ಕುಗಳ ಹೋರಾಟ ವೇದಿಕೆಯ ರಾಜ್ಯದ್ಯಕ್ಷರಾದ ಜಿ. ಅಂಜನಪ್ಪ ನೇತೃತ್ವದಲ್ಲಿ ದೇವಸ್ಥಾನದ ಮುಂಭಾಗ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು.

ಸ್ಥಳೀಯರ ಗಮನಕ್ಕೂ ಹಾಗೂ ಮುಜರಾಯಿ ಇಲಾಖೆಯ ಗಮನಕ್ಕೆ ತರದೆ ಪುರಾತನ ದೇವಸ್ಥಾನವನ್ನು ಧ್ವಂಸಗೊಳಿಸಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹಾಗಾಗಿ ಕಟ್ಟಡದ ಮಾಲೀಕ ನಾಗರಾಜ್ ಹಾಗು ಶಿವಕುಮಾರ್ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಘಟನೆ ಸಂಬಂಧ ರಾಜಗೋಪಾಲನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಕಟ್ಟಡದ ಮಾಲೀಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ನಂತರ ಮುಖಂಡರ ಸಮ್ಮುಖದಲ್ಲಿ ದೇವಸ್ಥಾನ ನಿರ್ಮಾಣ ಮಾಡಿಸುವುದಾಗಿ ಕಟ್ಟಡದ ಮಾಲೀಕ ಒಪ್ಪಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಶೇಂಗಾ ನಾಡು ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಮ್ಮರಾಜ್ ಗೌಡ್ರು, ‘ ಈ ಕಟ್ಟಡದ ಮಾಲೀಕನು ವಾಣಿಜ್ಯ ಕಟ್ಟಡ ನಿರ್ಮಾಣದ ಉದ್ದೇಶ ಇಟ್ಟುಕೊಂಡು ಪೀಣ್ಯ 2ನೇ ಹಂತದಲ್ಲಿ ಪುರಾತನ ಸಂಕಷ್ಟ ಹರ ಗಣಪತಿ ದೇವಸ್ಥಾನವನ್ನು ಒಡೆದು ಹಾಕಿ ದೌರ್ಜನ್ಯ ಎಸಗಿದ್ದಾರೆ. ಯಾವುದೇ ಒಂದು ಪ್ರಾಣ ಪ್ರತಿಷ್ಠಾಪನೆ ಆಗಿರುವ ದೇವರ ಮೂರ್ತಿಯನ್ನು ತೆರವುಗೊಳಿಸಬೇಕಾದರೆ ಹಿಂದೂ ಸಂಪ್ರದಾಯದ ಪ್ರಕಾರ ಅದರದೇ ಆದ ನೀತಿ ನಿಯಮಗಳು ಇರುತ್ತವೆ ಇದನ್ನೆಲ್ಲವನ್ನು ಲೆಕ್ಕಿಸದೆ ದೇವಸ್ಥಾನವನ್ನು ಧ್ವಂಸಗೊಳಿಸಿ, ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಂತಹವರಿಗೆ ಜನರ ಬಗ್ಗೆ ಹಾಗೂ ಕಾನೂನು ಬಗ್ಗೆ ಯಾವುದೇ ಭಯವಿಲ್ಲ ದಂತಾಗುತ್ತದೆ ಹಾಗಾಗಿ ದೇವಸ್ಥಾನವನ್ನು ಧ್ವಂಸಗೊಳಿಸಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಅಹಿಂದ ಹಕ್ಕುಗಳ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷರಾದ ಜಿ. ಆಂಜನಪ್ಪ ಮಾತನಾಡಿ, ‘ಕೆಲವರ ಕುಮ್ಮಕ್ಕಿನಿಂದ ಬೇರೆ ದುರುದ್ದೇಶದಿಂದ ಸ್ಥಳೀಯ ಮುಖಂಡರ ಗಮನಕ್ಕೂ ತರದೇ ಯಾರದೋ ಮಾತು ಕೇಳಿ ಏಕಾಏಕಿ ದೇವಸ್ಥಾನ ಧ್ವಂಸ ಮಾಡುವ ನಿರ್ಧಾರ ತೆಗೆದುಕೊಂಡಿರುವ ನಿರ್ಧಾರವು ಇಲ್ಲಿನ ಜನರ ನಂಬಿಕೆಗೆ ಅವಮಾನ ಮಾಡಿದಂತಾಗಿದೆ. ನಮ್ಮ ಹಿರಿಯರು ಕಟ್ಟಿದ ದೇವಸ್ಥಾನಗಳನ್ನು ಒಡೆದು ಹಾಕಲು ಅನುಮತಿ ಕೊಟ್ಟವರ್ಯಾರು. ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸುರೇಶ್, ಪ್ರಕಾಶ್, ತೇಜು, ಅಮರ್, ಮಂಜುನಾಥ್ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರು ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!