
ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ಇತ್ತೀಚೆಗೆ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಖ್ಯಾತಚಲನಚಿತ್ರ ಹಿರಿಯನಟಿ ದಿವಂಗತ ಡಾ.ಎಂ.ಲೀಲಾವತಿ ಅವರ ಏಕಮಾತ್ರ ಪುತ್ರ ಚಲನಚಿತ್ರನಟ ವಿನೋದ್‌ರಾಜ್ ಅವರು ಭೇಟಿನೀಡಿ ಮಾತುಕತೆ ನಡೆಸಿದ್ದರು. ಮೂರು ದಿನಗಳ ನಂತರ ಕೊಲೆಯಾಗಿರುವ ರೇಣುಕಾಸ್ವಾಮಿಯವರ ಚಿತ್ರದುರ್ಗದ ನಿವಾಸಕ್ಕೂ ಭೇಟಿಕೊಟ್ಟು ಅವರ ಪತ್ನಿ ಮತ್ತು ಕುಟುಂಬವನ್ನು ಖುದ್ದು ಸಂತೈಸಿದ್ದು ಹಾಗೂ ರೂ.ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಇದರ ನಡುವೆ ಸಾಮಾಜಿಕ ತಾಣಗಳಲ್ಲಿ ನಟ ವಿನೋದ್‌ರಾಜ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸಿಯಾಗಿರುವ ಚಲನಚಿತ್ರನಟ ದರ್ಶನ್ ಅವರ ಪರವಾಗಿ ರಾಜೀ ಸಂಧಾನಕ್ಕಾಗಿಯೇ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದು ದರ್ಶನ್ ಅವರ ಮಾತುಕತೆಯ ಹಿನ್ನೆಲೆಯಲ್ಲಿ ಈ ಭೇಟಿ ಆಗಿರಬಹುದು ಎಂಬ ಆರೋಪದ ಮಾತುಗಳು ಸಾಮಾಜಿಕ ಜಾಲತಾಣಗಳ ಮುಖೇನ ಹರಿದಾಡಲಾರಂಭಿಸಿದ್ದವು. ಇದನ್ನು ಗಮನಿಸಿ ಎಚ್ಚೆತ್ತುಕೊಂಡಿರುವ ಚಲನಚಿತ್ರ ನಟ ವಿನೋದ್‌ರಾಜ್ ಅವರು ನೆಲಮಂಗಲ ಸನಿಹದ ಸೋಲದೇವನಹಳ್ಳಿಯಲ್ಲಿರುವ ಅವರ ಸ್ವಗೃಹದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಕ್ರಿಯೆ :ನಟ ದರ್ಶನ್ ಅವರೊಬ್ಬ ಕಲಾವಿದರಾಗಿ ನನಗೆ ಸ್ನೇಹಿತರಾಗಿದ್ದು ಅವರು ಜೈಲು ಪಾಲಾಗಿರುವುದಕ್ಕೆ ಸೌಜನ್ಯ ರೀತಿಯಲ್ಲಿ ನಾನೂ ಕೂಡ ಒಬ್ಬ ಚಲನಚಿತ್ರನಟ ಅಥವಾ ಕಲಾವಿದನಾಗಿ ಅವರ ಕುಶಲೋಪರಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೆ. ಅದೇ ರೀತಿಯಲ್ಲಿ ಕೊಲೆಯಾಗಿದ್ದಾರೆನ್ನಲಾದ ರೇಣುಕಾಸ್ವಾಮಿ ಅವರ ಶ್ರೀಮತಿಯವರು ಗರ್ಭಿಣಿಯಾಗಿದ್ದಾರೆ ಅಂದರೆ ತಾಯಿಯಾಗಲಿದ್ದಾರೆಂಬ ಕಾರಣಕ್ಕೆ ಹುಟ್ಟುವ ಆ ಮಗುವಿಗೆ ಮುಂದಿನ ದಿನಗಳಲ್ಲಿ ಒಂದಿಷ್ಟು ಒಳ್ಳೆಯದಾಗಲೆಂಬ ಉದ್ದೇಶದಿಂದ ಅವರನ್ನು ಮುಖಃತಹ ಭೇಟಿ ಮಾಡಿ ಸಾಂತ್ವನದ ನುಡಿಗಳೊಂದಿಗೆ ನನ್ನ ಕೈಲಾದಷ್ಟು ಸಣ್ಣ ಪ್ರಮಾಣದ ಆರ್ಥಿಕ ನೆರವು ನೀಡಿದ್ದೇನೆ ಅಷ್ಟೇ.
ರಾಜೀ ಸಂಧಾನವಿಲ್ಲ: ಹುಟ್ಟುವ ಮಗುವಿಗೆ ನನ್ನಿಂದ ಒಳ್ಳೇಯದನ್ನು ಮಾಡಲಿಕ್ಕೆ ಆಗುತ್ತಾ ಅನ್ನುವ ಉದ್ದೇಶ ಮತ್ತು ಆ ಒಂದು ದೃಷ್ಠಿಯಲ್ಲಿ ನಮ್ಮಿಂದಾದ ಸಣ್ಣ ಕಾಣಿಕೆಯನ್ನು ನೀಡಿದ್ದೇನೆ ಹೊರತು ನಾನು ಯಾವುದೇ ರೀತಿಯ ರಾಜೀ ಸಂಧಾನವನ್ನು ಮಾಡಲು ಹೋಗಿಲ್ಲ ಮತ್ತು ಹೋಗಲು ಸಾಧ್ಯವಿಲ್ಲ ಹಾಗೂ ಆ ಕೆಲಸವನ್ನು ನಾವು ಮಾಡುವುದೂಯಿಲ್ಲ ಎಂಬ ಸ್ಪಷ್ಟನೆಯನ್ನು ನಟ ವಿನೋದ್‌ರಾಜ್ ಅವರು ನೀಡಿದ್ದಾರೆ.