
ಪಬ್ಲಿಕ್ ರೈಡ್ ನ್ಯೂಸ್ ದಾಸರಹಳ್ಳಿ.: ಕನ್ನಡಿಗರ ಅಸ್ಮಿತೆಯಾಗಿರುವ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಒತ್ತಾಯಿಸಿದರು.
ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಆಯೋಜಿಸಿದ್ದ “ಕರ್ನಾಟಕದಲ್ಲಿ ಕನ್ನಡಿಗರಿಗೆ ಇಲ್ಲ ಉದ್ಯೋಗ” ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
1983ರಲ್ಲೇ ಡಾ.ಸರೋಜಿನಿ ಮಹಿಷಿ ವರದಿ ಮಂಡನೆಯಾದರೂ ಈವರೆಗೂ ಅನುಷ್ಠಾನ ಆಗಿಲ್ಲ. ಪರಿಣಾಮ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ರೈಲ್ವೆ, ಕೇಂದ್ರೀಯ ಕಾರ್ಖಾನೆ, ಸಾರ್ವಜನಿಕ ಆಸ್ಪತ್ರೆ ಸೇರಿ ಸರ್ಕಾರದ ಪ್ರತಿ ಇಲಾಖೆಗಳಲ್ಲೂ ಕನ್ನಡಿಗರಿಗೇ ಉದ್ಯೋಗ ಸಿಗಬೇಕು. ಇದಕ್ಕಾಗಿ ಸರ್ಕಾರ ದಿಟ್ಟಕ್ರಮ ಕೈಗೊಂಡು ಈ ಮಣ್ಣಿನ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು ಎಂದು ಒತ್ತಾಯಿಸಿದರು.
ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಅನ್ಯಭಾಷಿಕರೇ ತುಂಬಿ ತುಂಬಿದ್ದಾರೆ. ಇದೊಂದು ನಾಡದ್ರೋಹ ಕೆಲಸ. ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ ಅಂತ ಡಾ.ಮಹಿಷಿ ವರದಿಯೇ ಹೇಳುತ್ತದೆ. ಹಾಗಾಗಿ ಕನ್ಬಡಿಗರ ಹಿತ ಕಾಯುವ ವರದಿಯನ್ನು ಕೂಡಲೇ ಸರ್ಕಾರ ಜಾರಿಗೊಳಿಸಲೇಬೇಕೆಂಬುದು ಕನ್ನಡ ಸೇನೆಯ ಹಕ್ಕೊತ್ತಾಯವಾಗಿದೆ ಎಂದರು.
ಒಂದೊಮ್ಮೆ ಸರ್ಕಾರ ವರದಿ ಜಾರಿಮಾಡದಿದ್ದರೆ ರಾಜ್ಯಾದ್ಯಂತ ಗೋಕಾಕ್ ಮಾದರಿಯ ಉಗ್ರ ಚಳವಳಿ ಮಾಡಬೇಕಾಗುತ್ತದೆ ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಸೇನೆಯ ಪದಾಧಿಕಾರಿಗಳಾದ ಮುನಿಕೃಷ್ಣ್ಪ ತಿಮ್ಮಪ್ಪ, ಸೋಮಶೇಖರ ಸಂತೋಷ್, ಶ್ರೀನಿವಾಸ್ ರಾಜೇಂದ್ರ ಕೊಣ್ಣೂರ , ಮಹಾಂತೇಶ್ ಚಿದಾನಂದ್ ಕೃಷ್ಣಮೂರ್ತಿ ಮೊದಲಾದವರಿದ್ದರು