April 16, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಅಲ್ಪ ಅವಧಿಯಲ್ಲಿ ಸ್ವಂತ ಕಟ್ಟಡ ಹೊಂದಿದ ಸೌಂದರ್ಯ ಸಹಕಾರಿ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮಾಜದಲ್ಲಿ ಎಲ್ಲರ ಜೊತೆಗೂ ಸೌಹಾರ್ದದಿಂದ ಬದುಕನ್ನು ಮುನ್ನಡೆಸಿಕೊಂಡು ಬಂದರೆ ಸಮಾಜವು ನಮ್ಮೊಡನೆ ಸೌಹಾರ್ದದ ಬದುಕನ್ನು ಬೆಳೆಸುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿ ಹೇಳಿದರು.

ಹಾವನೂರು ಬಡಾವಣೆಯ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಪ್ರಧಾನ ಕಚೇರಿ ಉದ್ಘಾಟಿಸಿ ಮಾತನಾಡಿದರು.

‘ ಸಂಸ್ಥೆಯಿಂದ ಸಮಾಜ ಬೆಳೆಯಬೇಕು, ಹಾಗೆಯೇ ಸಮಾಜದಿಂದ ಸಹಕಾರ ಬೆಳೆಯಬೇಕು. ನಮ್ಮ ಬದುಕಿಗೆ ಈ ಸಮಾಜದಲ್ಲಿ ಸಂಪತ್ತು ಕೂಡ ಅವಶ್ಯಕ. ಅದನ್ನು ಕೂಡಿಟ್ಟುಕೊಂಡರೆ ಬದುಕು ವಿನಾಶ, ಅದನ್ನು ಪರಸ್ಪರ ಸಹಕಾರದಿಂದ ಹೊರಗೆ ಹಾಕುತ್ತಿರಬೇಕು. ಆಗ ನೆಮ್ಮದಿ ಸಾಧ್ಯ’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಸೌಂದರ್ಯ ಪಿ ಮಂಜಪ್ಪ ಮಾತನಾಡಿ’ ಸಂಘದ ಪ್ರಾರಂಭಕ್ಕೆ ಪೇಜಾವರ ಶ್ರೀಗಳ ಆಶೀರ್ವಾದದಿಂದ ಸಂಘ ಬೆಳೆಯುತ್ತಿದೆ. ನಮ್ಮ ಸಂಘದ ಸರ್ವ ಸದಸ್ಯರ ನಿಷ್ಠೆ, ನಂಬಿಕೆ ಉಳಿಸಿಕೊಂಡು ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಸದಸ್ಯರ ನಂಬಿಕೆಗೆ ಚುತಿ ಬರದ ರೀತಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ’ ಎಂದರು.

ವ್ಯವಸ್ಥಾಪಕ ನಿರ್ದೇಶಕ ಕೆ ಕೃಷ್ಣಶೆಟ್ಟಿ ಮಾತನಾಡಿ’ ಹತ್ತು ವರ್ಷದ ಹಿಂದೆ 20 ಲಕ್ಷ ಶೇರು ಬಂಡವಾಳದಲ್ಲಿ ಪ್ರಾರಂಭವಾದ ಸಹಕಾರಿಯು 125 ಕೋಟಿ ಠೇವಣಿ ಇದ್ದು, 115 ಕೋಟಿ ಯನ್ನು ಸದಸ್ಯರಿಗೆ ಸಾಲ ನೀಡಿದೆ, ಹತ್ತು ವರ್ಷಗಳಲ್ಲಿ 3.75 ಕೋಟಿ ಲಾಭ ಗಳಿಸಿದೆ. 5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ಎಂ ಕೀರ್ತನ್ ಕುಮಾರ್, ಉಪಾಧ್ಯಕ್ಷೆ ಎಂ. ಸುನಿತಾ, ಸದಸ್ಯೆ ಪ್ರತಿಕ್ಷಾ, ಕೋ ಆಪರೇಟಿವ್ ಸೊಸೈಟಿಗಳ ಸಂಘಟನೆಯ ರಾಜ್ಯ ಅಧ್ಯಕ್ಷ ವೈ ಕುಮಾರ್, ಕೆ.ಎಸ್.ಎಸ್.ಎಫ್.ಸಿ.ಎಲ್ ನಿರ್ದೇಶಕ ಶರಣಗೌಡ ಜಿ. ಪಾಟೀಲ, ವರುಣ್ ಕುಮಾರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!