ಧಾರವಾಡ : ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ಜಿಲ್ಲಾ ಘಟಕವು ಫೆಬ್ರವರಿ 8ರಂದು ಸಂಜೆ 4ಕ್ಕೆ ಜನರಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮ್ಯಾರಥಾನ್ ಓಟ ಆಯೋಜಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಪರ್ವೀನ್ ಬಾನು ಬುಳ್ಳಣ್ಣವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕೆಸಿಡಿ ಮೈದಾನದಿಂದ ಕರ್ನಾಟಕ ವಿಶ್ವ ವಿದ್ಯಾಲಯದ ವರೆಗೆ ಈ ಮ್ಯಾರಾಥಾನ್ ನಡೆಯಲಿದೆ ಎಂದರು.
ನೌಕರರು ಸೇರಿದಂತೆ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳಾ ನೌಕರರು, ಸಂಘಟನೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಪಾಲ್ಗೊಳ್ಳಬಹುದು. 400- 500 ಜನ ಮ್ಯಾರಾಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ. ಸಂಘದ ರಾಜ್ಯಾಧ್ಯಕ್ಷೆ ರಮಾ ಆರ್. ಹಾಗೂ ಸಂಸ್ಥಾಪಕ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಶೈಲಜಾ ಸಿ.ವಿ. ಮ್ಯಾರಾಥಾನ್ ಗೆ ಚಾಲನೆ ನೀಡುವರು ಎಂದು ಹೇಳಿದರು.
ಸರಕಾರಿ ಮಹಿಳಾ ನೌಕರರ ಹಿತಾಭಿವೃದ್ಧಿಗಾಗಿ ಈ ಸಂಘ ರಚನೆಗೊಂಡಿದೆ. ಸರಕಾರ ನೌಕರರ ಸಂಘದ ಅಧೀನದಲ್ಲಿಯೇ ಈ ಸಂಘ ಕೆಲಸ ಮಾಡಲಿದೆ. ಮಹಿಳಾ ನೌಕರರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಮಹಿಳಾ ಸಂಘ ರಚನೆಗೊಂಡಿದೆ. ತಾಲೂಕು ಘಟಕಗಳನ್ನೂ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಸುವರ್ಣಾ ಚೀಟಿನ ಮಾತನಾಡಿ, ಸಂಘದ ಧಾರವಾಡ ಜಿಲ್ಲಾ ಘಟಕದಲ್ಲಿ ಸದ್ಯ 1 ಸಾವಿರ ಸದಸ್ಯರು ಹೆಸರು ನೋಂದಾಯಿಸಿದ್ದಾರೆ. ಎಲ್ಲ ಇಲಾಖೆಗಳಲ್ಲಿನ ಮಹಿಳಾ ನೌಕರರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು. ಸಂಘದ ಜಿಲ್ಲಾ ಗೌರವ ಅಧ್ಯಕ್ಷೆ ವೀಣಾ ಹೊಸಮನಿ, ಅನ್ನಪೂರ್ಣಾ ಹಿರೇಮಠ, ಜಯಶ್ರೀ ಕಟ್ಟಿಮನಿ, ಶೀತಲ ಜೋಗೂರ ಸುದ್ದಿಗೋಷ್ಠಿಯಲ್ಲಿದ್ದರು.
