Oplus_16908288
ಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ದರ್ಶನ ಬಡಾವಣೆಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದ ಏಳು ಜನರಲ್ಲಿ ಒಬ್ಬ ಮೃತಪಟ್ಟಿದ್ದು, ಆರು ಜನ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಈ ಘಟನೆಯ ತನಿಖೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೇಪಾಳ ದೇಶದ ಮೂಲದ 40 ವರ್ಷದ ಬಿವೇಕ್ ಅವರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ನರೇಶ್, ನಿತೇಶ್, ದೀಕ್ಷೇಶ್, ಲಕ್ಷ್ಮಣ್, ಸುದನ್, ಕುಮಾರ್ ಸೇರಿದ ಆರು ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲಾ ಏಳು ಜನರೂ ಧಾರವಾಡ ನಗರದ ಕೆ.ಸಿ. ಪಾರ್ಕ್ ಬಳಿಯ ‘ಮೊಮೋಸ್ ಫಾಸ್ಟ್ ಫುಡ್ ಸೆಂಟರ್’ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ನಂತರ ಅವರು ಒಟ್ಟಿಗೆ ಆಹಾರ ತಯಾರಿಸಿಕೊಂಡು ಸೇವಿಸಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಅಡುಗೆಗಾಗಿ ಬಳಸಿದ ಇಂಧನದಿಂದ (ಇದ್ದಲು/ಗೋಬರಿ ಗ್ಯಾಸ್) ಹೊರಸೂಸಿದ ವಿಷವಾಯು ಕಾರಣವಾಗಿರಬಹುದು ಅಥವಾ ಆಹಾರ ವಿಷಬಾಧೆಯೂ ಆಗಿರಬಹುದು ಎಂದು ಶಂಕಿಸಲಾಗಿದೆ. ಮನೆಯ ಕಿಟಕಿ-ಬಾಗಿಲುಗಳು ಮುಚ್ಚಿದ್ದ ಕಾರಣ ವಾತಾಯನವಿಲ್ಲದೆ ವಿಷವಾಯು ಹರಡಿರುವ ಸಾಧ್ಯತೆ ಇದೆ.
ಈ ಬಗ್ಗೆ ಹೇಳಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ರವರು, “ನಿಖರವಾದ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆಹಾರದ ಮಾದರಿ ಮತ್ತು ಮೃತ ದೇಹದ ಪೋಸ್ಟ್ ಮಾರ್ಟಂ ವರದಿಗಾಗಿ ಪರೀಕ್ಷೆಗಳು ನಡೆಯುತ್ತವೆ. ಘಟನೆಯ ಎಲ್ಲ ಮುಖಗಳನ್ನು ಪರಿಶೀಲಿಸುವ ತನಿಖೆ ಆರಂಭಿಸಲಾಗಿದೆ” ಎಂದರು.
ಈ ಘಟನೆಯನ್ನು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅಕಾಲಿಕ ಮರಣದ ಪ್ರಕರಣವಾಗಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
