January 29, 2026

Oplus_16908288

ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ : ​ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಗ್ರಂಥಾಲಯದ ಮೇಲ್ವಿಚಾರಕನಿಗೆ ಮೂರು ತಿಂಗಳಿನಿಂದ ವೇತನ ನೀಡದೆ, ಜೊತೆಗೆ ಕೆಲಸದಿಂದಲೂ ತೆಗೆದು ಹಾಕಿದ ಅಮಾನವೀಯ ಘಟನೆಯೊಂದು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಇದರಿಂದ ಮನನೊಂದ ಮೇಲ್ವಿಚಾರಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು ಆತ್ಮಹತ್ಯೆಗೆ ಶರಣಾದ ದುರ್ದೈವಿ, ತ್ಯಾಮಗೊಂಡ್ಲು ಹೋಬಳಿಯ ಗೋವೇನಹಳ್ಳಿಯ ನಿವಾಸಿ ರಾಮಚಂದ್ರಪ್ಪ (58). ವ್ಯವಸಾಯದ ಜೊತೆಗೆ, ಇವರು ಕಳಲುಘಟ್ಟ ಗ್ರಾಮ ಪಂಚಾಯತಿಯಲ್ಲಿ ಕಳೆದ 25 ವರ್ಷಗಳಿಂದ ಗ್ರಂಥಾಲಯದ ಮೇಲ್ವಿಚಾರಕರಾಗಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.


​ಮೂಲಗಳ ಪ್ರಕಾರ, ಮೃತರಾದ ರಾಮಚಂದ್ರಪ್ಪನವರಿಗೆ ಕಳಲುಘಟ್ಟ ಗ್ರಾಮ ಪಂಚಾಯತಿಯ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಶ್ರೀಮತಿ ಗೀತಾಮಣಿ ಅವರು ಕಳೆದ ಮೂರು ತಿಂಗಳಿನಿಂದ ವೇತನ ನೀಡಿರಲಿಲ್ಲ ಎನ್ನಲಾಗಿದೆ. ಬಡತನದಲ್ಲಿದ್ದ ರಾಮಚಂದ್ರಪ್ಪ ವೇತನಕ್ಕಾಗಿ ಪದೇ ಪದೇ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಇತ್ತೀಚೆಗೆ ಅವರನ್ನು ಕೆಲಸದಿಂದಲೂ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ. ​

ಸಂಬಳವಿಲ್ಲದೆ, ಇದ್ದ ಕೆಲಸವನ್ನೂ ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾದಾಗ, ತೀವ್ರ ಮನನೊಂದ ರಾಮಚಂದ್ರಪ್ಪ ಅವರು ಕೃಷಿ ಬಳಕೆಯ ಕೀಟನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

​ದೂರು ದಾಖಲು, ಕಾನೂನು ಕ್ರಮಕ್ಕೆ ಆಗ್ರಹ
​ಈ ಘಟನೆ ಸಂಬಂಧ ಮೃತರ ಮೊಮ್ಮಗ ಕಾಂತರಾಜು ಅವರು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಡಿಒ ಗೀತಾಮಣಿ ಅವರ ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಯಿಂದಲೇ ತಮ್ಮ ಅಜ್ಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

​ದೂರು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪಿಡಿಒ ಅವರ ಕ್ರಮದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!