ಧಾರವಾಡ: ಪಿಜಿ ಡಿಪ್ಲೋಮಾ ಕೋರ್ಸ್ ಹಾಗೂ ವಸತಿ ನಿಲಯ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಕವಿವಿ ಪಿಜಿ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯವು 2025-26ನೇ ಸಾಲಿನ ಪಿ.ಜಿ. ಡಿಪ್ಲೋಮಾ ಕೋರ್ಸ್ ಹಾಗೂ ವಸತಿ ನಿಲಯದ ಪ್ರವೇಶ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಹೆಚ್ಚಳವು ಸಾಮಾನ್ಯ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊರೆ ಉಂಟು ಮಾಡುತ್ತದೆ. ಗ್ರಾಮೀಣ ಹಿನ್ನೆಲೆಯಿಂದ ಬರುವ ಮತ್ತು ಸ್ವಂತ ಆರ್ಥಿಕ ಸಾಮರ್ಥ್ಯದಿಂದಲೇ ಶಿಕ್ಷಣ ಮುಂದುವರೆಸುತ್ತಿರುವ ಅನೇಕ ವಿದ್ಯಾರ್ಥಿಗಳಿಗೆ ಈ ಹೆಚ್ಚಿನ ಶುಲ್ಕ ಭರಿಸುವುದು ಕಷ್ಟಕರವಾಗಿದೆ.
ಶಿಕ್ಷಣವು ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕಾದ ಹಕ್ಕು ಎಂಬ ದೃಷ್ಟಿಯಿಂದ ಈ ನಿರ್ಧಾರವನ್ನು ಪುನರ್ವಿಚಾರಿಸಿ, ಹಳೆಯ ಮಟ್ಟದ ಶುಲ್ಕ ಅಥವಾ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪ್ರಮಾಣದಲ್ಲಿ ಶುಲ್ಕವನ್ನು ನಿಗದಿಪಡಿಸಬೇಕು ಹಾಗೆಯೇ ವಸತಿ ನಿಲಯದ ಪ್ರವೇಶ ಶುಲ್ಕವನ್ನೂ ಕೂಡ ಹಿಂದಿನ ಮಟ್ಟಕ್ಕೆ ಇಳಿಸುವ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
