
ಪಬ್ಲಿಕ್ ರೈಡ್ ನ್ಯೂಸ್
ಹನೂರು: ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂದಿನ ತಿಂಗಳು ಪ್ರಾರಂಭವಾಗುವ ಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರು ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.
ಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಶುದ್ದ ಕುಡಿಯುವ ನೀರು, ದಾಸೋಹ ಭವನ, ಸರತಿ ಸಾಲಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಎಲ್ಲಾ ರೀತಿಯ ಸಿದ್ಧತೆ ಮುಖ್ಯವಾಗಿ ಕುಡಿಯುವ ನೀರು, ನೆರಳು, ದಾಸೋಹ, ದರ್ಶನ ವ್ಯವಸ್ಥೆ ಸಂಬಂಧ ಹೆಚ್ಚಿನ ಗಮನ ನೀಡಿರುವ ಅವರು ವಿವಿಧ ಕಡೆ ಭೇಟಿ ನೀಡಿದ್ದರು
ಶ್ರೀ ಕ್ಷೇತ್ರಕ್ಕೆ ಬರುವ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪುದುವಟ್ಟು ಸೇವಾ ಕೇಂದ್ರದ ಸಮೀಪ ಪ್ರತ್ಯೇಕವಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು ಪರಿಶೀಲನೆ ಮಾಡಿ ಗುಣ ಮಟ್ಟ ವಿಚಾರಿಸಿದ್ದರು .
ಪ್ರಾಧಿಕಾರದ ವತಿಯಿಂದ ತೆರೆಯಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ . ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಾತ್ರೆಗೆ ಹೆಚ್ಚು ಜನರು ಬರುವುದರಿಂದ ಹೆಚ್ಚುವರಿ ತಾತ್ಕಾಲಿಕ ಸರತಿ ಸಾಲು ನಿರ್ಮಾಣ ಮಾಡಿ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ದಾಸೋಹ ಭವನಕ್ಕೆ ಭೇಟಿ ನೀಡಿ ಭಕ್ತರ ಜೊತೆಯಲ್ಲಿಯೇ ಕುಳಿತು ಪ್ರಸಾದ ಸ್ವೀಕರಿಸಿ, ದಾಸೋಹ ಭವನದ ಸಿಬ್ಬಂದಿಗಳ ಜೊತೆ ಮಾತನಾಡಿ, ಭಕ್ತರಿಗೆ ಒಂದೇ ರೀತಿಯ ತಿಂಡಿ ನೀಡುವುದು ಬೇಡ, ಪ್ರತಿದಿನ ಒಂದೊಂದು ತಿಂಡಿ ಮಾಡಿ ಹಾಗೂ ಹೆಚ್ಚು ತರಕಾರಿಗಳನ್ನು ಹಾಕಿ, ಶುದ್ಧ ಮತ್ತು ಗುಣಮಟ್ಟದ ಆಹಾರ ಪೂರೈಕೆ ಮಾಡಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪಾರುಪತ್ತೆಗಾರ ಮಲ್ಲಿಕಾರ್ಜುನ್, ಸಿಬ್ಬಂದಿಗಳಾದ ಮಹೇಶ್, ಸೆಲ್ವಗಣಪತಿ ಇನ್ನಿತರರು ಹಾಜರಿದ್ದರು.
ವರದಿಗಾರರು
ಪಿ ಸುರೇಶ್ ಬಿ ಗುಂಡಾಪುರ 7022991304