May 13, 2025

ಧಾರವಾಡ

ಮಲಪ್ರಭಾ ಬಲದಂಡೆ ಕಾಲುವೆ ಅಡಿ ಬರುವ ಧಾರವಾಡ ಜಿಲ್ಲೆಯಲ್ಲಿನ ನವಲಗುಂದ, ಅಣ್ಣಿಗೇರಿ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳುವ ಸಲುವಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಮೇ 13 ರಿಂದ ಮೇ 22 ರ ವರೆಗೆ ನವಿಲುತೀರ್ಥ ಜಲಾಶಯದಿಂದ ನೀರನ್ನು ಮಲಪ್ರಭಾ ಬಲದಂಡೆ ಕಾಲುವೆಯ ಮುಖಾಂತರ ಬಿಡುಗಡೆ ಮಾಡಲು ಆದೇಶಿಸಿದ್ದು, ನೀರು ಸದ್ಬಳಕೆ ಆಗುವಂತೆ ನಿಗಾವಹಿಸಲು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಸಿ, ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮತ್ತು ನರಗುಂದ ಹಾಗೂ ರೋಣ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ನರಗುಂದ ಶಾಖಾ ಕಾಲುವೆಗೆ ಪ್ರತಿ ದಿನ 700 ಕ್ಯೂಸೆಕ್ಸ್ ನಂತೆ 10 ದಿನಗಳವರೆಗೆ ಹಾಗೂ ಮಲಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 900 ಕ್ಯೂಸೆಕ್ಸ್ ನಂತೆ 10 ದಿನಗಳವರೆಗೆ, ಹೀಗೆ ಪ್ರತಿದಿನ ಒಟ್ಟು 1600 ಕ್ಯೂಸೆಕ್ಸ್ ನಂತೆ 10 ದಿನಗಳ ಅವಧಿಗೆ ಒಟ್ಟು 1.036 ಟಿಎಂಸಿ ನೀರನ್ನು ದಿನಾಂಕ 13-05-2024 ರಿಂದ 22-05-2024ರ ವರೆಗೆ ನವಿಲುತೀರ್ಥ ಜಲಾಶಯದಿಂದ ಬಿಡುಗಡೆಗೊಳಿಸಲು ಅಧೀಕ್ಷಕ ಅಭಿಯಂತರರು, ಕ.ನೀ.ನಿ.ನಿ ಎಂ.ಆರ್.ಬಿ.ಸಿ ವೃತ್ತ ಧಾರವಾಡ ಇವರಿಗೆ ಷರತ್ತಿಗೊಳಪಟ್ಟು ಆದೇಶಿಸಿದ್ದಾರೆ.

ಮಲಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಕೇವಲ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ.

ಈ ಸಮಯದಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾರ್ವಜನಿಕರು, ರೈತರು ಈ ನೀರನ್ನು ಕೃಷಿ ಹಾಗೂ ಇನ್ನಿತರೆ ಬೇರೆ ಯಾವುದೇ ಉದ್ದೇಶಕ್ಕೆ ಪಂಪ್ ಸೆಟ್‍ನಿಂದ ಅಥವಾ ಇನ್ನಿತರ ಉಪಕರಣಗಳಿಂದ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕರು, ರೈತರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!