
ಧಾರವಾಡ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಮೇಲೆ ಥಳುಸಿ ಹಲ್ಲೆ ಮಾಡಿದಲ್ಲದೆ ಚಿನ್ನಾಭರಣ ದೋಚಿಕೊಂಡು ಕಿರಾತಕ ಖದೀಮರು ಪರಾರಿಯಾಗಿರೋ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ.
ಮಾಳಮಡ್ಡಿಯ ಡಾ.ಆನಂದ ಕಬ್ಬೂರ ಎಂಬುವವರ ಮನೆಗೆ ನುಗ್ಗಿದ ಇಬ್ಬರು ಖದೀಮರು, ಮನೆಯಲ್ಲಿದ್ದ ವಿನೋದಿನಿ ಎಂಬ ವೃದ್ಧೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮಧ್ಯಾಹ್ನ ಊಟದ ಸಮಯಕ್ಕೆ ಮನೆಯಲ್ಲಿ ವಿನೋದಿನಿ ಎಂಬ ವೃದ್ಧೆ ಒಬ್ಬರೇ ಇದ್ದಿದ್ದನ್ನು ಕಂಡು ಏಕಾಏಕಿ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನೇರವಾಗಿ ಮನೆಗೆ ಬಂದು ಬಾಗಿಲು ಬಡಿದ ಖದೀಮರು, ಬಾಗಿಲು ತಳ್ಳಿ ಒಳಗೆ ನುಗ್ಗಿದ್ದಾರೆ. ಮನೆಯಲ್ಲಿ ವೃದ್ಧೆ ಇರುವುದನ್ನು ಗಮನಿಸಿದ್ದ ಖದೀಮರು ಹಿರಿಯ ಜೀವದ ಮೇಲೆ ಹಲ್ಲೆ ನಡೆಸಿ ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆನಂತರ ಮನೆಯ ಸಿಸಿಟಿವಿ ಕ್ಯಾಮೆರಾ ಹಾಗೂ ಡಿವಿಆರ್ ಸಹ ಕದ್ದುಕೊಂಡು ಪರಾರಿಯಾಗಿದ್ದಾರೆ. ಅಂದಾಜು 25 ಸಾವಿರ ಮೌಲ್ಯದ ಚಿನ್ನದ ಸರವನ್ನು ಖದೀಮರು ಕದ್ದುಕೊಂಡು ಹೋಗಿದ್ದಾರೆ.
ಹಲ್ಲೆಯಿಂದ ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದಾರೆ. ಡಾ.ಆನಂದ ಅವರು ಪ್ರತಿಷ್ಠಿತ ವೈದ್ಯರಾಗಿದ್ದಾರೆ. ಅವರ ಮನೆಗೇ ನುಗ್ಗಿದ ಖದೀಮರು, ಈ ಕೃತ್ಯ ಎಸಗಿದ್ದಾರೆ. ಜನನಿಬೀಡ ಪ್ರದೇಶದಲ್ಲೇ ಡಾ.ಆನಂದ ಅವರ ಮನೆ ಇದ್ದು, ಮುಖ್ಯರಸ್ತೆಗೆ ಹೊಂದಿಕೊಂಡೇ ಈ ಮನೆ ಇದೆ. ಹಾಡಹಗಲೇ ಮನೆಗೆ ಈ ಖದೀಮರು ನುಗ್ಗಿ ಕೃತ್ಯ ಎಸಗಿದ್ದರಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಹಾಗೂ ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್ ಸಂಗಮೇಶ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.