April 18, 2025

ಪಬ್ಲಿಕ್ ರೈಡ್ ಹುಬ್ಬಳ್ಳಿ: ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ – 2025 ನ್ನು ಜ.5 ರಂದು ಸಂಜೆ 6 ಗಂಟೆಗೆ ಇಲ್ಲಿನ ಮೂರುಸಾವಿರಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕತ್ತಲನ್ನು ಹೊಗಲಾಡಿಸಿ ಬೆಳಕನ್ನು ಚಿಮ್ಮುವ, ಬೆಳಕಿನ ಹಬ್ಬ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಕಳೆದ ವರ್ಷದಿಂದ ಆಚರಣೆ ಮಾಡುತ್ತಾ ಬರಲಾಗಿದೆ. ಅದರಂತೆ ಈ ವರ್ಷವು ಆಕಾಶ ಬುಟ್ಟಿ ಹಬ್ಬ ಆಚರಿಸಲಾಗುತ್ತಿದೆ. ಈ ವರ್ಷವು ವಿವಿಧ ಪ್ರದೇಶಗಳಿಂದ ಜನರು ತಾವೇ ಸ್ವತಃ ಆಕಾಶಬುಟ್ಟಿ ತಯಾರಿಸಿ ಹಾರಿಸಲಿದ್ದಾರೆ. ಉತ್ತಮ ಆಕಾಶಬುಟ್ಟಿಗಳಿಗೆ ನಗದು ಬಹುಮಾನ ಕೊಡಲಾಗುವುದು ಎಂದರು.

ಇನ್ನು ಆಕಾಶಬುಟ್ಟಿ ಹಬ್ಬದ ಪ್ರಯುಕ್ತವಾಗಿ ಮಹಿಳೆಯರಿಗೆ, ಮಕ್ಕಳಿಗಾಗಿ ಈಗಾಗಲೇ ನಗರದಲ್ಲಿ ರಂಗೋಲಿ, ಮೆಹಂದಿ, ವಡಪು ಹೇಳುವ ಸ್ಪರ್ಧೆ ನಡೆಸಲಾಗುತ್ತಿದೆ ಅವರಿಗೂ ಅಂದು ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಆಕಾಶಬುಟ್ಟಿ ಹಬ್ಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಮಹೇಶ ಟೆಂಗಿನಕಾಯಿ, ಉದ್ಯಮಿ ವಿ.ಎಸ್.ವಿ ಪ್ರಸಾದ್ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ಮೂರುಸಾವಿರಮಠದ ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಮಿಥುನ್ ಚೌಹಾನ್, ದೀಪಕ ಜಿತೂರಿ, ವಿನಾಯಕ ಲದವಾ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!