
ಪಬ್ಲಿಕ್ ರೈಡ್ ಧಾರವಾಡ: ನಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆಯ ಕನಸು ಈಗ ಸಾಕಾರಗೊಂಡಿದೆ. ಪ್ರತ್ಯೇಕ ಪಾಲಿಕೆ ಹೋರಾಟದ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತಿದೆ. ಜಿಲ್ಲೆಯ ಹಿರಿಕರ ಹಾಗೂ ಜನಪ್ರತಿನಿಧಿಗಳ ಹೋರಾಟದ ಫಲವಾಗಿ ಧಾರವಾಡ ಮಹಾನಗರಕ್ಕೆ ಪ್ರತ್ಯೇಕ ಪಾಲಿಕೆಗೆ ಅನುಮೋದನೆ ಸಿಕ್ಕಿದೆ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಜಿಲ್ಲೆಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಿಂದಲೇ ನಾನು ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಪ್ರಯತ್ನ ನಡೆಸಿದ್ದೆ. ತದನಂತರ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲೂ ನನ್ನ ಪ್ರಯತ್ನ ಮುಂದುವರೆದಿತ್ತು. ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಬದಲಾದರೂ ನನ್ನ ಈ ಪ್ರಯತ್ನ ನಿರಂತರವಾಗಿತ್ತು. ಈ ಕುರಿತು ಪ್ರತಿಯೊಂದು ಅಧಿವೇಶನದಲ್ಲಿ ನಾನು ಧ್ವನಿ ಎತ್ತುತ್ತಾ ಬಂದಿದ್ದೆ. ಅಲ್ಲದೇ, ಮೊನ್ನೆಯ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ನನ್ನ ಈ ಪ್ರಯತ್ನವನ್ನ ತೀವ್ರಗೊಳಿಸಿದ್ದಕ್ಕೂ ಸಾರ್ಥಕ ಭಾವ ಮೂಡಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಭೈರತಿ ಸುರೇಶ್, ಮಾಜಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಲ್ಲದೇ, ಮಾನ್ಯ ಶಾಸಕರಾದ ಪ್ರಸಾದ್ ಅಬ್ಬಯ್ಯ, ವಿನಯ ಕುಲಕರ್ಣಿ, ಮಾಜಿ ಶಾಸಕರಾದ ಅಮೃತ ದೇಸಾಯಿ ಅವರು ಸೇರಿದಂತೆ ಧಾರವಾಡದ ಅನೇಕ ಮುಖಂಡರ ಹೋರಾಟದ ಫಲ ಮತ್ತು ಅವಳಿನಗರದ ಎಲ್ಲಾ ರಾಜಕೀಯ ನಾಯಕರು ಪಕ್ಷಾತೀತವಾಗಿ ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಧಾರವಾಡ ಪಾಲಿಕೆಗೆ ಅನುಮೋದನೆ ದೊರೆತಿದೆ. ಈ ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ನಾನು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರತ್ಯೇಕ ಪಾಲಿಕೆ ರಚನೆಯ ಸಂತಸದ ನಡುವೆಯೇ, ಕೈಗಾರಿಕಾ ವಲಯಗಳ ವೃದ್ಧಿ, ಗಡಿ ಪ್ರದೇಶಗಳ ಸೇರ್ಪಡೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಅನೇಕ ಸವಾಲುಗಳೂ ನಮ್ಮ ಮುಂದಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಎಂದಿನಂತೆ ತಮ್ಮೆಲ್ಲರ ಪ್ರೀತಿ ಮತ್ತು ಸಹಕಾರ ಜೊತೆಗಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.