
ಪೀಣ್ಯ,ದಾಸರಹಳ್ಳಿ: ದಾಸರಹಳ್ಳಿ ಶಾಸಕರಾದ ಎಸ್ ಮುನಿರಾಜುರವರ ಮಾರ್ಗದರ್ಶನದಲ್ಲಿ ಹೆಗ್ಗನಹಳ್ಳಿ ಹಾಗೂ ರಾಜಗೋಪಾಲನಗರ ವಾರ್ಡ್ ನ ಬಿಜೆಪಿ ಮುಖಂಡರುಗಳ ನೇತೃತ್ವದಲ್ಲಿ ಪೀಣ್ಯ 2ನೇ ಹಂತದ ಮುನಿಗಂಗಪ್ಪ ಮೈದಾನದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ 14 ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಿ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ಸಾಮೂಹಿಕ ಗಣೇಶೋತ್ಸವದ ಮೆರೆವಣಿಗೆಗೆ ಶಾಸಕ ಎಸ್.ಮುನಿರಾಜು ಚಾಲನೆ ನೀಡಿದರು.
ದಾಸರಹಳ್ಳಿ ಶಾಸಕ ಎಸ್‌ಮುನಿರಾಜು ಪತ್ನಿ ಸುಜಾತ ಹಾಗೂ ಮಗಳು ರೇಷ್ಮಾ ರವರು ಕೂಡಾ ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿದರು. ಕಲಾತಂಡಗಳು ಅದ್ದೂರಿ ಮೆರವಣಿಗೆಗೆ ಮೆರುಗು ನೀಡಿದವು. ಕಲಾತಂಡಗಳ ಸದ್ದಿಗೆ ನೂರಾರು ಯುವಕರು, ಮಹಿಳೆಯರು, ಭಕ್ತಾದಿಗಳು ಹೆಜ್ಜೆ ಹಾಕಿದರು. ರಸ್ತೆಯುದ್ದಕ್ಕೂ ಸೇರಿದ್ದ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಅಂಗವಾಗಿ ನಿರಂತರ ಅನ್ನದಾನ ಏರ್ಪಡಿಸಲಾಗಿತ್ತು.
ಮುನಿಗಂಗಪ್ಪ ಮೈದಾನದಿಂದ ಪ್ರಾರಂಭವಾದ ಗಣೇಶೋತ್ಸವದ ಮೆರವಣಿಗೆಯು ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಮುಖ್ಯರಸ್ತೆ, ಹೆಗ್ಗನಹಳ್ಳಿ ಕ್ರಾಸ್, ನೀಲಗಿರಿತೋಪು ಮೂಲಕ ಸುಂಕದಕಟ್ಟೆ ಪೈಪ್ ಲೈನ್ ವರೆಗೂ ಸಾಗಿ ನಂತರ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್ ಗಂಗರಾಜು, ದಾಸರಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷರಾದ ಸೋಮಶೇಖರ್, ವಾರ್ಡ್ ಅಧ್ಯಕ್ಷರಾದ ನರಸಿಂಹಮೂರ್ತಿ, ಸಪ್ತಗಿರಿ ಮಂಜುನಾಥ್, ಮಾಜಿ ಬಿಬಿಎಂಪಿ ಸದಸ್ಯ ಭಾಗ್ಯಮ್ಮರವರ ಪತಿ ಕೃಷ್ಣಯ್ಯ, ಸಪ್ತಗಿರಿ ಆನಂದ್ ಮಾಜಿ ಸದಸ್ಯ ಹೆಚ್.ಎನ್ ಗಂಗಾಧರ್, ಬಿಜೆಪಿ ಮುಖಂಡರಾದ ದಿನೇಶ್, ನಾಗೇಶ್, ಮೋಹನ್ ,ಕೆ.ಸಿ ರವಿಗೌಡ, ಪುಟ್ಟಸ್ವಾಮಿ, ಲಕ್ಷ್ಮಣ್, ಕಂಪ್ಯೂಟರ್ ವಿಜಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಗಣ್ಯರು, ಸ್ಥಳೀಯರು, ಭಕ್ತಾದಿಗಳು ಉಪಸ್ಥಿತರಿದ್ದರು.