
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ಆಪಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್(ರಿ), ಅಹಿಂದ ಹಕ್ಕುಗಳ ಹೋರಾಟ ವೇದಿಕೆ(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಾಜಗೋಪಾಲನಗರದ ಡಾ. ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಭವನದ ಆವರಣದಲ್ಲಿ ರಂಗಭೂಮಿ ಕಲಾವಿದರಾದ ಜಿ ಆಂಜನಪ್ಪರವರಿಗೆ ಜಾನಪದ ಸಂಭ್ರಮ ಕಾರ್ಯಕ್ರಮದ ಮೂಲಕ ಅಭಿನಂದನಾ ಸಮಾರಂಭವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಪೀಣ್ಯ 2ನೇ ಹಂತದ ಡಾ. ಬಿ.ಆರ್ ಅಂಬೇಡ್ಕರ್ ಬಸ್ ನಿಲ್ದಾಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಕ್ ಕಟ್ ಮಾಡುವ ಮೂಲಕ ಆಂಜನಪ್ಪನವರ ಹುಟ್ಚುಹಬ್ಬವನ್ನು ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಅದ್ದೂರಿಯಾಗಿ ಆಚರಿಸಿದರು.
ಜಾನಪದ ಸಂಭ್ರಮದ ಅಂಗವಾಗಿ ತಬ್ಬನಹಳ್ಳಿ ರಾಜು ಹಾಗೂ ತಂಡದವರಿಂದ ಅಂಬೇಡ್ಕರ್ ಗೀತ ಗಾಯನ ಮತ್ತು ಚನ್ನಪಟ್ಟಣ ಜಯಸಿಂಹ ಹಾಗೂ ತಂಡದವರಿಂದ ಜಾನಪದ ಗೀತ ಗಾಯನ, ಜಾನಪದ ನೃತ್ಯದ ಮೂಲಕ ಅಭಿನಂದನಾ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಜಗೋಪಾಲನಗರದಲ್ಲಿ ನಡೆದ ಅದ್ದೂರಿ ಜಾನಪದೋತ್ಸವ ಕಾರ್ಯಕ್ರಮದಲ್ಲಿ ಜಾನಪದ ತಂಡಗಳು, ಕಾಂತಾರ ಕಲಾ ಪ್ರಕಾರ, ಡೊಳ್ಳು, ಕಲಾ ತಂಡಗಳಿಂದ ಗಾರುಡಿ ಗೊಂಬೆ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಕಲಾವಿದರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಸಹಾಯ ಹಸ್ತ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರುದ್ರೇಗೌಡ್ರು, ‘ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಲು ಇಂತಹ ಸಂಘ ಸಂಸ್ಥೆಗಳಿಂದ ಹೆಚ್ಚಿನ ಕಾರ್ಯಕ್ರಮಗಳು ನಡೆಯಬೇಕು. ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಜಾನಪದೋತ್ಸವ ಮಾಡುವ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಧನ ಸಹಾಯ ಮಾಡಬೇಕು. ಕಲಾವಿದರಿಗೆ ಇತ್ತೀಚಿನ ದಿನಗಳಲ್ಲಿ ತಾರತಮ್ಯವಾಗುತ್ತಿದೆ. ತಾರತಮ್ಯ ನೀಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಎಸ್.ಸಿ/ಎಸ್ಟಿ ವರ್ಗದವರಿಗೆ ಮೀಸಲಿಟ್ಟಿರುವ ಹಣವನ್ನು ಕಲಾವಿದರಿಗೆ ಕೊಟ್ಟು ಕಲಾವಿದರನ್ನು ಬೆಳೆಸಬೇಕು’, ಎಂದು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಕಲಾವಿದರಾದ ಜಿ ಆಂಜನಪ್ಪ, ‘ಸುಮಾರು ವರ್ಷಗಳಿಂದ ಕಲಾ ಪೋಷಣೆ ಮಾಡುತ್ತಾ ಬಂದಿದ್ದೇನೆ. ರಂಗಭೂಮಿಗೆ ನನ್ನ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ. ಕಲಾವಿದರಿಗೆ ನ್ಯಾಯ ಒದಗಿಸಲು ನಾನು ಶ್ರಮಿಸುತ್ತೇನೆ. ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕಲಾವಿದರಿಗೆ ಇನ್ನಷ್ಟು ಹೆಚ್ಚಿನ ಸಹಕಾರ ನೀಡಬೇಕು’, ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ಬಿ ಜಗದೀಶ್ ಕುಮಾರ್, ಕಾಂಗ್ರೆಸ್ ಮುಖಂಡರು ಹಾಗೂ ಸಹಾಯ ಹಸ್ತ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರುದ್ರೇಗೌಡ್ರು, ಮಾಜಿ ನಗರಸಭಾ ಸದಸ್ಯ ಶಿವಣ್ಣ, ಡಿಎಸ್ಎಸ್ ಮೂರ್ತಿ, ಅಧ್ಯಕ್ಷರಾದ ಉಮೇಶ್ ರಾವಣ್,ಸೌಭಾಗ್ಯ, ರೇಣು ಪ್ರಸಾದ್, ಅಹಿಂದ ಹಕ್ಕುಗಳ ಹೋರಾಟ ವೇದಿಕೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಎಂ ಕೆಂಪರಾಜು, ಜಿಲ್ಲಾ ಗೌರವಾಧ್ಯಕ್ಷರಾದ ಎಂ ವಿಜಯ್, ಸಂಘಟನಾ ಕಾರ್ಯದರ್ಶಿ ಜಿ ರಾಜು, ಮಧು, ಗಂಗನರಸಯ್ಯ, ಸುನೀಲ್ ಕುಮಾರ್ ಹೆಚ್, ನೀಲರಾಜು, ಹೆಚ್ ಪ್ರದೀಪ್, ಸೌಂಡ್ ಬಾಕ್ಸ್ ಬಾಬಣ್ಣ, ಏಳುಮಲೈ, ಸತೀಶ್ ಗೌಡ, ಮಹಿಳಾ ಮುಖಂಡರಾದ ರೇಣುಕಮ್ಮ, ಶಾಂತಮ್ಮ, ಜಯಮ್ಮ, ಮಂಜುಳಮ್ಮ, ಜಿಲ್ಲಾಧ್ಯಕ್ಷರಾದ ಕೆ ಸುವರ್ಣ, ಮಹಾಲಕ್ಷ್ಮಿ, ರುಕ್ಮಿಣಿ, ಇಂದಿರಾ, ಶಾರದಮ್ಮ, ಭಾಗ್ಯಮ್ಮ, ಕೃಷ್ಣಯ್ಯ ಸೇರಿದಂತೆ ಪ್ರಮುಖರು, ಮಹಿಳೆಯರು, ಕಾರ್ಯಕರ್ತರು ಮತ್ತು ರಾಜಗೋಪಾಲನಗರ, ಹೆಗ್ಗನಹಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ, ತಾಲೂಕುಗಳ, ಸಂಘಟನೆಯ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.