May 2, 2025

ಧಾರವಾಡ

ಕಳೆದ ಐದು ವರ್ಷಗಳಿಂದ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸುತ್ತಲೇ ಬಂದಿದ್ದರೂ, ಆದರೆ ಇದನ್ನು ಕೇಂದ್ರ ಸರ್ಕಾರ ಮಾಡಲಿಲ್ಲ. ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಹೊಸದು ಏನಾದರೊಂದು ಮಾಡಬೇಕು ಎಂದು, ಕೇಂದ್ರ ಸರ್ಕಾರ ಈಗ ಜನಗಣತಿ, ಜಾತಿಗಣತಿಯನ್ನು ತಂದಿದೆ. ಇದೊಂದು ರೀತಿಯಲ್ಲಿ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಸಿಕ್ಕ ಫಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಟಾಂಗ್ ನೀಡಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಮೊದಲು ಕೇಂದ್ರದವರು ಜನಗಣತಿ ಮಾಡುವುದಿಲ್ಲ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡಿದಾಗ ಅದಕ್ಕೆ ಕೇಂದ್ರದವರು ಟಿಪ್ಪಣಿ ಕೊಡುತ್ತಿದ್ದರು. ನಾವು ಹಿಂದುಳಿದ ಜಾತಿಗಳಿಗೆ 54 ಪ್ಯಾರಾ ಮೀಟರ್ ಸೆಟ್ ಮಾಡಿದ್ದೇವೆ. ಒಬಿಸಿಯವರು ಎಷ್ಟು ಜನ ಇದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದರು.

ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಏನಾದರೊಂದು ಚರ್ಚೆಗೆ ತರಬೇಕು ಎಂದು ಜನಗಣತಿ ತಂದು ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಅಲ್ಲಿ ಅವರು ಗಣತಿ ಮಾಡಲಿ. ಇಲ್ಲಿ ನಾವು ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಇಲ್ಲ. ನಾವು ಗಣತಿ ಮಾಡಬೇಕು ಎಂದು ಉದ್ದೇಶಿಸಿದ್ದೆವು ಆ ಪ್ರಕಾರ ಮಾಡಿದ್ದೇವೆ.

ಕೇಂದ್ರದವರು ಈಗ ಗಣತಿ ಮಾಡಲು ಮುಂದೆ ಬಂದಿದ್ದಾರೆ ಮಾಡಲಿ. ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಒಬಿಸಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಐದು ವರ್ಷಗಳಿಂದ ರಾಹುಲ್ ಗಾಂಧಿ ಬಹಳ ಗಟ್ಟಿಯಾಗಿ ಮಾತನಾಡಿದ್ದಾರೆ. ಈ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಗಣತಿ ಮಾಡುತ್ತಿದ್ದರೆ ಅದು ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜಯ ಎಂದು ನಾನು ಭಾವಿಸುತ್ತೇನೆ ಎಂದರು. ಜತೆಗೆ ಒಬಿಸಿ ಯಾರು ಎಂದು ಹೇಗೆ ಕಂಡು ಹಿಡಿಯುತ್ತಾರೆ? ಕೇಂದ್ರ ಸರ್ಕಾರ ಇದನ್ನು ಕಂಡು ಹಿಡಿಯುತ್ತಾ? ಒಬಿಸಿ ಎನ್ನುವುದು ಸ್ಟೇಟ್ ಸಬ್ಜಕ್ಟ್ ಆಗುತ್ತದೆ.

ಕೇಂದ್ರಕ್ಕೆ ಒಬಿಸಿ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಇರುವ ಒಬಿಸಿ ಮಹಾರಾಷ್ಟ್ರದಲ್ಲಿ ಬೇರೆ ಇರುತ್ತಾರೆ. ನಾವು ಪ್ಯಾರಾಮೀಟರ್ ಫಿಕ್ಸ್ ಮಾಡಿ ಮಾಡಿದ್ದೇವೆ. ಅದಕ್ಕೆ ಬಿಜೆಪಿಯವರು ವಿರುದ್ಧವಾಗಿ ಹೋಗುತ್ತಾರೆ ಎಂದು ನಾವು ಏನೂ ಮಾಡಲು ಆಗೋದಿಲ್ಲ. ಕೇಂದ್ರ ಸರ್ಕಾರ ಏಕೆ ವಿರುದ್ಧ ಹೋಗುತ್ತಿದೆಯೋ ಗೊತ್ತಿಲ್ಲ. ನಾವು ಮಾಡಿರುವ ಗಣತಿ ಸಮರ್ಪಕವಾಗಿದೆ. ಬೇಕಾದರೆ ಅವರು ಚೆಕ್ ಮಾಡಿ ಸಲಹೆ ಕೊಡಲಿ. ತಮಿಳುನಾಡು ಗಣತಿ ಮಾಡಿ ಶೇ.69 ಮೀಸಲಾತಿ ತೆಗೆದುಕೊಂಡಿದ್ದಾರೆ. ಮೊನ್ನೆ ಬಿಹಾರದವರು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಿಜೆಪಿಯವರದ್ದು ಈಗ ಒನ್, ಟು, ತ್ರೀ ಆಲ್ ಇಂಡಿಯಾ ಫ್ರೀ ಎಂಬಂತೆ ನಿಲುವು ಇದೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಕೇಂದ್ರಕ್ಕೆ ಇಲ್ಲ. ನನ್ನ ಪ್ರಕಾರ ಗಣತಿ ಮಾಡುವ ಅಧಿಕಾರ ಎಲ್ಲ ರಾಜ್ಯಗಳಿಗೂ ಇದೆ ಎಂದರು..

Leave a Reply

Your email address will not be published. Required fields are marked *

error: Content is protected !!