
ಧಾರವಾಡ
ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಸಂಬಂಧ ಸಂವಿಧಾನದಲ್ಲಿ ಬದಲಾವಣೆ ತರಬೇಕಾಗುತ್ತದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೇಳಿಕೆ ಖಂಡಿಸಿ, ಧಾರವಾಡದಲ್ಲಿ ಬಿಜೆಪಿ ಬೀದಿಗೆ ಇಳಿದು ಬೃಹತ್ ಪ್ರತಿಭಟನೆ ನಡೆಸಿ ಡಿಸಿಎಂ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಲಾಯಿತು.
ಧಾರವಾಡದ ಕಡಪಾ ಮೈದಾನದಿಂದ ಡಿಕೆಶಿ ಅವರ ಪ್ರತಿಕೃತಿ ಮೆರವಣಿಗೆ ಮಾಡಿದ ಬಿಜೆಪಿ ಕಾರ್ಯಕರ್ತರು, ಆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿದರು. ಧಾರವಾಡದ ಜ್ಯುಬಿಲಿ ವೃತ್ತಕ್ಕೆ ಬಂದ ಪ್ರತಿಭಟನಾಕಾರರು, ಅಲ್ಲಿ ಮಾನವ ಸರಪಳಿ ನಿರ್ಮಿಸಿ ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿ, ಡಿಕೆಶಿ ಹಾಗೂ ರಾಜ್ಯ ಕೈ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜ್ಯುಬಿಲಿ ವೃತ್ತದಲ್ಲೇ ಡಿ.ಕೆ.ಶಿವಕುಮಾರ ಅವರ ಪ್ರತಿಕೃತಿ ಹಾಗೂ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಕಿಡಿಕಾರಿದರು. ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕೇವಲ ಒಂದು ಸಮುದಾಯವನ್ನು ಓಲೈಸುವುದಕ್ಕೋಸ್ಕರ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ…?. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡುವುದರ ಮೂಲಕ ಡಿ.ಕೆ.ಶಿವಕುಮಾರ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈ ಕೂಡಲೇ ಡಿಕೆಶಿಯವರು ರಾಜ್ಯದ ಜನರ ಕ್ಷಮೆ ಕೇಳಬೇಕು ಜತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.