
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್ ನಂ 23 ನೆಲಗದರನಹಳ್ಳಿಯ ಸರ್ವೆ ನಂ.23 ರ ಸರ್ಕಾರಿ ಜಮೀನಿನಲ್ಲಿ ಒತ್ತುವರಿಯಾಗಿರುವ 15 ಗುಂಟೆ ಜಾಗವನ್ನು ತೆರವುಗೊಳಿಸಲು ಬಂದಿದ್ದ ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಂಬಂಧಪಟ್ಟ ಜಮೀನಿನ ಕಡತಗಳ ಕೊರತೆಯಿಂದಾಗಿ ಒತ್ತುವರಿದಾರರ ವಿರೋಧದಿಂದಾಗಿ ಇಂಗು ತಿಂದ ಮಂಗನಂತೆ ಹಿಂದಿರುಗಿದ ಪ್ರಸಂಗ ಇಂದು ನಡೆಯಿತು.
ನೆಲಗದರನಹಳ್ಳಿ ಗ್ರಾಮಸ್ಥರ ದೂರಿನ ಮೇರೆಗೆ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರರು ಸರ್ವೆ ಮಾಡಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು.ಅದರಂತೆ,ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು,ಬಿಬಿಎಂಪಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ಆಗಮಿಸಿದ್ದರು.
ಆಗ ಒತ್ತುವರಿದಾರರು ಈ ಜಾಗ ನಮ್ಮದೇ ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸು ಇರುತ್ತದೆ.ಜೊತೆಗೆ ನಮಗೆ ಸರ್ಕಾರದಿಂದ ಯಾವುದೇ ನೋಟೀಸ್ ಜಾರಿಗೊಳಿಸದೆ ಬಂದಿದ್ದೀರಿ ಎಂದು ಪ್ರಶ್ನಿಸಿದರು.ಜೊತೆಗೆ ಅಧಿಕಾರಿಗಳ ಬಳಿ ಸರಿಯಾದ ಕಡತ ಹಾಗೂ ಮಾಹಿತಿ ಇಲ್ಲದೆ ಬಂದಿದ್ದರಿಂದ ಅಧಿಕಾರಿಗಳು ಗಲಿಬಿಲಿಗೊಂಡು ಅಪಹಾಸ್ಯಕ್ಕೀಡಾಗಬೇಕಾಯಿತು.
ಸದರಿ ಜಮೀನಿನಲ್ಲಿ 20 ಗುಂಟೆಯನ್ನು 2001ರಲ್ಲಿ ಸರ್ಕಾರದಿಂದ ನಮಗೆ ಮಂಜೂರು ಮಾಡಿಕೊಡಲಾಗಿದೆ ಎಂದು ಒತ್ತುವರಿದಾರರೊಬ್ಬರು ತಿಳಿಸುತ್ತಾರೆ.ಅದಕ್ಕೆ ಸಂಬಂಧಿಸಿದ ಆದೇಶ ಕಡತಗಳನ್ನು ಕೇಳಿದರೆ ಮುಂದಿನ ವಾರ ತಹಶೀಲ್ದಾರ್ ಕಚೇರಿಗೆ ತಲುಪಿಸುತ್ತೇವೆ ಎಂದು ಹೇಳಿದಾಗ,ಸದರಿ ಜಮೀನಿನ ಬಗ್ಗೆ ಸಮಗ್ರ ಮಾಹಿತಿ ಇಲ್ಲದ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹಿಂದುರಿಗಿದ ಹಾಸ್ಯಾಸ್ಪದ ಪ್ರಸಂಗ ನಡೆಯಿತು.
ಯಾರಿಗೆ ಎಲ್ಲಾದರೂ ಕೊಡಲಿ,ಸರ್ವೆ ನಂ.23 ರಲ್ಲಿ ಇರುವಂತೆ 15 ಗುಂಟೆ ಗೋ ಕಟ್ಟೆ ಜಾಗವನ್ನು ಉಳಿಸಿ ಸರ್ಕಾರಿ ಶಾಲೆಗೆ ಮೈದಾನಕ್ಕೆ ನೀಡಬೇಕೆಂದು ಗ್ರಾಮದ ಮುಖ್ಯಸ್ಥ ಮುನಿನಾರಾಯಣಪ್ಪ ಆಗ್ರಹಿಸಿದರು.
ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರಾದ ಚೈತ್ರಕುಮಾರ್,ಗ್ರಾಮ ಆಡಳಿತಾಧಿಕಾರಿ ರಾಜಶೇಖರ್,ಕಂದಾಯ ಅಧಿಕಾರಿ ಬಸವರಾಜು, ಬಿಬಿಎಂಪಿ ಎಇಇ ನಾಗಭೂಷಣ ಹಾಗೂ ಸಿಬ್ಬಂದಿ ಹಾಜರಿದ್ದರು.