
ಹುಬ್ಬಳ್ಳಿ: ದೇಶಾದ್ಯಂತ ಸಾಕಷ್ಟು ಸುದ್ದಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್‌ಸಿ ಕೋರ್ಟ್ ಗೆ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿ ನೇಹಾ ಹಿರೇಮಠ
ವಿದ್ಯಾನಗರದ ಪ್ರತಿಷ್ಠಿತ ಕಾಲೇಜಿನ ಆವರಣದಲ್ಲಿ ಎ.18ರಂದು ನೇಹಾಳ ಹಳೆಯ ಸಹಪಾಠಿ ಸವದತ್ತಿ ಮೂಲದ ಫಯಾಜ್ ಎಂಬಾತನು ಪ್ರೀತಿ ನಿರಾಕರಿಸಿದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿ ಕಾಲೇಜು ಆವರಣದಲ್ಲಿ ಪೊಲೀಸರ ಬಂಧಿಸಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಪ್ರೀತಿ ನಿರಾಕರಿಸಿದ್ದರಿಂದ ಸಿಟ್ಟಾಗಿ ನೇಹಾಳ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ, ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಕಾಲೇಜೊವೊಂದರಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿತ್ತು.
ದೇಶದಾದ್ಯಂತ ನೇಹಾಳ ಕೊಲೆ ಖಂಡಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಎನ್ ಕೌಂಟರ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಸೇರಿದಂತೆ ಕೊಲೆಯಾದ ನೇಹಾಳ ತಂದೆ, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಕೂಡ ಒತ್ತಾಯಿಸಿದರು.
ಪ್ರಕರಣ ಗಂಭೀರತೆ ಪಡೆದ ಹಿನ್ನೆಲೆ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಎಸ್ ಪಿ. ಎನ್ ವೆಂಕಟೇಶ ನೇತೃತ್ವದಲ್ಲಿ ಸುಮಾರು 2 ತಿಂಗಳು 20 ದಿನಗಳವರೆಗೆ ತನಿಖೆ ಸಿಐಡಿ ಡಿವೈಎಸ್‌ಪಿ ಎನ್.ಎಚ್. ಪೈಕ್ ಅವರು ಸ್ಥಳೀಯ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.